ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿಯ ಕೊರತೆ: ಮಜೀದ್ ಕೊಡ್ಲಿಪೇಟೆ

Update: 2016-12-18 18:08 GMT

ಮಂಗಳೂರು, ಡಿ. 17: ಅಲ್ಪಸಂಖ್ಯಾತರ ಮತಗಳನ್ನು ಪಡೆದು ಚುನಾಯಿತರಾದ ಜನಪ್ರತಿನಿಧಿಗಳು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಲು ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರಚಿಸಲಾಗಿದ್ದ ವಿವಿಧ ಆಯೋಗಗಳ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಯಾವ ಸರಕಾರವೂ ಆಸಕ್ತಿ ತೋರಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ವಿಷಾದ ವ್ಯಕ್ತಪಡಿಸಿದ್ದಾರೆ.
 
 ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ.ಕ. ಜಿಲ್ಲಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ಮಿನಿ ವಿಧಾನಸೌಧ ಬಳಿಯ ಕರಾವಳಿ ಸಭಾಭವನದಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಮುಸ್ಲಿಮರ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯಲು ಸರಕಾರ ಸಾಚಾರ್, ರಂಗನಾಥ್ ಮಿಶ್ರ ಸಹಿತ ವಿವಿಧ ಆಯೋಗಗಳನ್ನು ರಚಿಸಿತ್ತು. ಆದರೆ, ಆ ಆಯೋಗಳನ್ನು ಸರಕಾರಕ್ಕೆ ಸಲ್ಲಿಸಿರುವ ವರದಿಗಳು ಮತ್ತು ಅವು ಮಾಡಿರುವ ಶಿಫಾರಸುಗಳ ಬಗ್ಗೆ ಸರಕಾರ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಚುನಾಯಿತರಾಗಿರುವ ಪ್ರತಿನಿಧಿಗಳು ಕೂಡ ಧ್ವನಿ ಎತ್ತಿಲ್ಲ. ಕೇವಲ ಅಲ್ಪಸಂಖ್ಯಾತ ಮುಸ್ಲಿಮರ ತುಷ್ಟೀಕರಣಕ್ಕಾಗಿ ಆಯೋಗಗಳನ್ನು ರಚಿಸಲಾಗುತ್ತಿದೆ. ಆ ಆಯೋಗಗಳ ವರದಿಗಳು ಮತ್ತು ಅವುಗಳ ಶಿಫಾರಸುಗಳನ್ನು ಸರಕಾರ ಕಾರ್ಯರೂಪಕ್ಕೆ ತರಬೇಕೆಂದು ಮಜೀದ್ ಕೊಡ್ಲಿಪೇಟೆ ಆಗ್ರಹಿಸಿದರು.

10 ಸಾವಿರೂ ಕೋಟಿ ರೂ.ಗೆ ಆಗ್ರಹ
 ಅಲ್ಪಸಂಖ್ಯಾರ ಪ್ರಗತಿಗಾಗಿ ಸರಕಾರ ಕೇವಲ 1 ಸಾವಿರ ರೂ. ಮಾತ್ರ ಮೀಸಲಿಟ್ಟಿದೆ. ಈ ಅನುದಾನದಿಂದ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರಕಾರ ಮುಂದಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ಮೀಸಲಿಡಬೇಕು ಮಜೀದ್ ಕೊಡ್ಲಿಪೇಟೆ ಆಗ್ರಹಿಸಿದರು.

ಮುಖ್ಯಮಂತ್ರಿಸಿದ್ದರಾಮಯ್ಯಯವರ ಶಾದಿ ಭಾಗ್ಯ ಯೋಜನೆಯಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಸಲ್ಲಿಕೆಯಾಗಿರುವ 27,594 ಅರ್ಜಿಗಳು ಇನ್ನೂ ಬಾಕಿ ಇವೆ. ಸರಕಾರದಿಂದ ಫಲಾನುಭವಿಗಳಿಗೆ ಸಿಗಬೇಕಾದ 50 ಸಾವಿರ ರೂ.ಗಾಗಿ ಮಹಿಳೆಯರು ಸರಕಾರಿ ಕಚೇರಿಗಳಲ್ಲಿ ಅಲೆದಾಟ ನಡೆಸುತ್ತಿದ್ದಾರೆ. ‘ವಿದ್ಯಾಸಿರಿ’ ಯೋಜನೆಯಡಿ 38,385 ವಿದ್ಯಾರ್ಥಿಗಳಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ 15,000 ರೂ. ಸಿಗಬೇಕಿತ್ತು. ಆದರೆ, ಸರಕಾರ ಕೇವಲ 6,000 ರೂ.ಗಳನ್ನು ಮಾತ್ರ ನೀಡಿದೆ. ವಿದ್ಯಾರ್ಥಿಗಳಿಗೆ ಸಲ್ಲಿಕೆಯಾಗಬೇಕಾದ 9,000 ರೂ.ಗಳನ್ನು ಬಾಕಿ ಇರಿಸಿದೆ. ಈ ಬಗ್ಗೆ ಕೇಳಿದರೆ ಬಜೆಟ್‌ನಲ್ಲಿ ಹಣ ಇಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಪ್ರಸ್ತುತ ಸರಕಾರ ಅಲ್ಪಸಂಖ್ಯಾತರಿಗಾಗಿ ಬಜೆಟ್‌ನಲ್ಲಿ ಮೀಸಲಿಟ್ಟಿರುವ 1000 ರೂ. ಅನುದಾನವನ್ನು ಮುಂದಿನ ವರ್ಷ 10 ಸಾವಿರ ರೂ.ಗೆ ಏರಿಕೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೊ ಮಾತನಾಡಿದರು.

ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಅಹಿಂದ ಹೋರಾಟಗಾರ ಸತೀಶ್ ಸಾಲ್ಯಾನ್, ಬಂಟ್ವಾಳ ಬ್ಯಾರಿ ಫೌಂಡೇಶನ್‌ನ ಉಪಾಧ್ಯಕ್ಷ ಕೆ.ಎಚ್.ಅಬೂಬಕರ್, ಸುರತ್ಕಲ್ ಮುಹಿಯುದ್ದೀನ್ ಮಸೀದಿಯ ಅಧ್ಯಕ್ಷ ಯಾಕೂಬ್, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೂಸಪ್ಪ, ಎಸ್‌ಡಿಟಿಯುನ ಜಲೀಲ್ ಕೃಷ್ಣಾಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News