ವಿದ್ಯೆಯ ವಿಕಾಸಕ್ಕೆ ರಂಗ ಕಲೆ ಪೂರಕ: ರಾಜ್‌ಗೋಪಾಲ್ ಶೇಟ್
ಉಡುಪಿ, ಡಿ.18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಮೈಸೂರು ಇದರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಂತರ್ ಕಾಲೇಜು ನಾಟಕ ಹಾಗೂ ಜನಪದ ನೃತ್ಯ ಸ್ಪರ್ಧೆಯ ತರಬೇತಿ ಶಿಬಿರವನ್ನು ಹಿರಿಯ ರಂಗಕರ್ಮಿ ರಾಜ್‌ಗೋಪಾಲ್ ಶೇಟ್ ಗುರುವಾರ ಕಲ್ಯಾಣಪುರ ಮಿಲಾ ಗ್ರಿಸ್ ಕಾಲೇಜಿನಲ್ಲಿ ಉದ್ಘಾಟಿಸಿದರು.
ವಿದ್ಯಾರ್ಥಿ ಸಮುದಾಯವು ರಂಗಭೂಮಿ ಕಡೆ ಆಸಕ್ತರಾದಾಗ ಅನೇಕ ಸುಪ್ತ ಪ್ರತಿಭೆ ಹೊರಬರಲು ಅವಕಾಶವಾಗುತ್ತದೆ. ಅಲ್ಲದೆ ಇದರೊಂದಿಗೆ ಶೈಕ್ಷಣಿಕವಾಗಿಯೂ ಮಹತ್ವದ ಸಾಧನೆ ಮಾಡಲು ಸಾಧ್ಯ. ರಂಗ ಚಟು ವಟಿಕೆಯು ಶಿಸ್ತು ಮತ್ತು ಬದ್ಧತೆಯನ್ನು ಕಲಿಸುವುದಲ್ಲದೇ ಒಳ್ಳೆಯ ಸ್ಮರಣ ಶಕ್ತಿ, ಜೀವನ ಕೌಶಲ, ಸಮೂಹ ಜೀವನ ಸಾಮಾಜಿಕ ಕಳಕಳಿ, ಶ್ರದ್ದೆ, ಜ್ಞಾನ, ಧೈರ್ಯದೊಂದಿಗೆ ನಿರಂತರ ಚೈತನ್ಯವನ್ನು ಒದಗಿಸುತ್ತದೆ ಎಂದು ರಾಜ್ ಗೋಪಾಲ ಶೇಟ್ ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂತರ್ ಕಾಲೇಜು ರಂಗೋತ್ಸವದ ಜಿಲ್ಲಾ ಸಂಚಾಲಕ ಪ್ರವೀಣ್ ಜಿ.ಕೊಡವೂರು, ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸವಿತಾ ಹೆಬ್ಬರ್, ಕಾಲೇಜು ಸಾಂಸ್ಕೃತಿಕ ಸಂಯೋಜಕ ರವಿನಂದನ್ ಭಟ್, ಯುವ ರಂಗಕರ್ಮಿಗಳಾದ ಅಕಾಶ್ ಹೆಬ್ಬಾರ್, ನಿಖಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.