ಇಂಡೊನೇಶ್ಯ: ಸೇನಾ ವಿಮಾನ ಪತನ; 13 ಯೋಧರು ಮೃತ್ಯು
ಜಕಾರ್ತ,ಡಿ.18: ಇಂಡೋನೇಶ್ಯದ ಪೂರ್ವ ಭಾಗದಲ್ಲಿ ರವಿವಾರ ಮಿಲಿಟರಿ ಸಾರಿಗೆ ವಿಮಾನವೊಂದು ಪತನಗೊಂಡು ಎಲ್ಲಾ 13 ಮಂದಿ ಯೋಧರು ಮೃತಪಟ್ಟಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಇಂಡೊನೇಶ್ಯದ ಸಶಸ್ತ್ರ ಪಡೆಯ ವಿಮಾನವೊಂದು ಅಪಘಾತಕ್ಕೀಡಾಗಿರುವುದು ಇದು ಎರಡನೆ ಸಲವಾಗಿದೆ.
ಪತನಗೊಂಡ ಹರ್ಕ್ಯುಲಿಸ್ ಸಿ-130 ಸೇನಾವಿಮಾನವು ಚಾಲಕ, ಸಿಬ್ಬಂದಿ ಸಹಿತ 13 ಮಂದಿ ಯೋಧರನ್ನು ಒಯ್ಯುತ್ತಿತ್ತು. ಪಪುವಾ ಪ್ರಾಂತದಲ್ಲಿರುವ ಟಿಮಿಕಾ ನಗರದಿಂದ ಹಾರಾಟವನ್ನು ಆರಂಭಿಸಿದ ವಿಮಾನವು ಭೂಸ್ಪರ್ಶ ಮಾಡುವುದಕ್ಕೆ ಕೆಲವೇ ನಿಮಿಷಗಳ ಮೊದಲು ದುರ್ಗಮವಾದ ಪರ್ವತ ಪ್ರದೇಶವೊಂದರಲ್ಲಿ ಪತನಗೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಅನಿಶ್ಚಿತವಾದ ಹವಾಮಾನವಿದ್ದು, ದಟ್ಟವಾದ ಮೋಡ ಮುಸುಕಿತ್ತೆಂದು ಇಂಡೊನೇಶ್ಯ ವಾಯುಪಡೆಯ ವರಿಷ್ಠ ಏಜಸ್ ಸುಪ್ರಿಯಾತ್ನ ತಿಳಿಸಿದ್ದಾರೆ. ಘಟನೆಯ ಬಳಿಕ ರಕ್ಷಣಾ ಕಾರ್ಯಕರ್ತರು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ ಹಾಗೂ ಎಲ್ಲಾ 13 ಮಂದಿಯ ಮೃತದೇಹಗಳು ದೊರಕಿವೆ.
ಕಳೆದ ನವೆಂಬರ್‌ನಲ್ಲಿ ಬೊರ್ನಿಯೊ ದ್ವೀಪದಲ್ಲಿ ಸೇನಾ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿ ಕನಿಷ್ಠ ಮೂವರು ಮೃತಪಟ್ಟಿದ್ದರು.