ನೋಟು ನಿಷೇಧ ತಡೆಹಿಡಿದ ವೆನಿಜುವೆಲಾ
ಕಾರಕಾಸ್,ಡಿ.18: ನೋಟು ರದ್ದತಿಯ ತನ್ನ ನಿರ್ಧಾರವನ್ನು ಲ್ಯಾಟಿನ್ ಅಮೆರಿಕದ ರಾಷ್ಟ್ರವಾದ ವೆನಿಜುವೆಲಾ ಶನಿವಾರ ತಾತ್ಕಾಲಿಕವಾಗಿ ತಡೆಹಿಡಿದಿದೆ. ನೋಟು ರದ್ದತಿ ನಿರ್ಧಾರವನ್ನು ಜನವರಿ 2ನೆ ತಾರೀಕಿನವರೆಗೆ ತಡೆಹಿಡಿಯಲಾಗಿದೆಯೆಂದು ವೆನಿಜುವೆಲಾ ಸರಕಾರದ ಮೂಲಗಳು ತಿಳಿಸಿವೆ. ಭಾರತದ ಮಾದರಿಯನ್ನು ಅನುಸರಿಸ ಹೊರಟ ವೆನಿಝುವೆಲಾ ಸರಕಾರವು 100 ಬೊಲಿವೆರ್ ನೋಟನ್ನು ಹಿಂದೆಗೆದುಕೊಳ್ಳಲು ಈ ಮೊದಲು ನಿರ್ಧರಿಸಿತ್ತು.
ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮುಡೆರೊ ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೋಟು ನಿಷೇಧದ ನಿರ್ಧಾರವನ್ನು ಮುಂದೂಡಲಾಗಿದೆಯೆಂದು ಪ್ರಕಟಿಸಿದ್ದಾರೆ. 500 ಬೊಲಿವೆರ್ ಕರೆನ್ಸಿ ನೋಟುಗಳು ಸಕಾಲದಲ್ಲಿ ಮುದ್ರಣಗೊಳ್ಳದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆದಿದೆ. ಇದರ ಪರಿಣಾಮವಾಗಿ ತಾನು 100 ಬೊಲಿವೆರ್ ಕರೆನ್ಸಿ ನೋಟುಗಳ ರದ್ದತಿಯನ್ನು ಮುಂದೂಡಿರುವುದಾಗಿ ಮುಡೆರೊ ತಿಳಿಸಿದ್ದಾರೆ. 100 ಬೊಲಿವೆರ್ ಕರೆನ್ಸಿ ನೋಟುಗಳನ್ನು ರದ್ದುಪಡಿಸುವ ವೆನಿಜುವೆಲಾ ಸರಕಾರದ ನಿರ್ಧಾರವು ಭಾರೀ ಗೊಂದಲಕ್ಕೆ ಕಾರಣವಾಗಿದೆ. ಹಳೆಯ ನೋಟುಗಳನ್ನು ಜಮೆ ಮಾಡಲು ಜನರು ಬ್ಯಾಂಕುಗಳಲ್ಲಿ ಗಂಟೆಗಟ್ಟಲೆ ಸಾಲುದ್ದದ ಕ್ಯೂಗಳಲ್ಲಿ ನಿಂತಿರುವ ದೃಶ್ಯಗಳು ವೆನಿಜುವೆಲಾದ್ಯಂತ ಕಂಡುಬರುತ್ತಿವೆ. ನೋಟು ರದ್ದತಿ ನಿರ್ಧಾರದ ಬಳಿಕ ವೆನಿಜುವೆಲಾದ ವಿವಿಧೆಡೆ ಅಂಗಡಿಮುಂಗಟ್ಟುಗಳಲ್ಲಿ ನಗದು ಕೊರತೆಯಿಂದಾಗಿ ವ್ಯವಹಾರಗಳು ಸ್ಥಗಿತಗೊಂಡಿವೆ. ಸಾರ್ವಜನಿಕರು ಹೆಚ್ಚಿನ ವ್ಯವಹಾರಗಳಿಗೆ ಕ್ರೆಡಿಟ್‌ಕಾರ್ಡ್ ಹಾಗೂ ಬ್ಯಾಂಕ್ ಮೂಲಕ ನಗದು ವರ್ಗಾವಣೆ ವ್ಯವಸ್ಥೆಗಳನ್ನೇ ಅವಲಂಬಿಸಬೇಕಾಗಿ ಬಂದಿದೆ.