×
Ad

ಭಟ್ಕಳ: ಗುಳ್ಮಿಯ ಗಾಂಜಾ ಜಾಲ ಬೇಧಿಸಿದ ಸ್ಥಳೀಯ ಯುವಕರು

Update: 2016-12-19 17:25 IST

ಭಟ್ಕಳ, ಡಿ.19 : ಭಟ್ಕಳ ನಗರಕ್ಕೆ ಹೊಂದಿಕೊಂಡಿರುವ ಗುಳ್ಳಿ ಪ್ರದೇಶದಲ್ಲಿ ಗಾಂಜಾ ಮಾರಾಟ ಜಾಲವೊಂದು ಅವ್ಯಾಹತವಾಗಿ ಕಾರ್ಯಚರಿಸುತ್ತಿದ್ದು ಸ್ಥಳೀಯ ಯುವಕರು ಬೀಸಿದ ಜಾಲಕ್ಕೆ ಗಾಂಜಾ ಮಾರಾಟಗಾರರು ಸಿಕ್ಕಿಬಿದ್ದಿದ್ದಾರೆ. 

ಸ್ಥಳೀಯ ಯುವಕರಿಗೆ ಸಾಥ್ ನೀಡಿದ ಡಿ.ಎಸ್.ಪಿ ಶಿವಕುಮಾರ್ ಹಾಗೂ ಸಿಪಿಐ ಸುರೇಶ್ ನಾಯಕರ ನೇತೃತ್ವದ ಪೊಲೀಸರ ತಂಡ ಗಾಂಜಾ ಮಾರಾಟದಲ್ಲಿ ತೊಡಗಿದ್ದ  ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬೀಬಿ ನಫೀಸಾ, ಬೀಬಿ ಫಾತಿಮಾ ಹಾಗೂ ಹುಸೇನ್ ಎಂದು ಗುರುತಿಸಲಾಗಿದ್ದು ಬಂಧಿತರಿಂದ 21 ಸಾವಿರ ಮೌಲ್ಯದ 7ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅತ್ಯಂತ ಹಿಂದುಳಿದ ಬಡವರೇ ಹೆಚ್ಚಾಗಿ ವಾಸವಾಗಿರುವ ಗುಳ್ಮಿ ಪ್ರದೇಶದಲ್ಲಿ ಹಲವು ವರ್ಷಗಳಿಂದಲೂ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು ಇದನ್ನು ಹಲವು ಬಾರಿ ಪೊಲೀಸರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗದಿದ್ದಾಗ ಸ್ಥಳೀಯ ಯುವಕರೇ ಪೊಲೀಸರ ಸಹಕಾರದೊಂದಿಗೆ ಇದನ್ನು ಬೇಧಿಸಿದ್ದಾರೆ ಎಂದು ಸ್ಥಳೀಯರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಗ್ರಾಹಕರ ವೇಷದಲ್ಲಿ ಗಾಂಜಾ ಖರೀದಿಸಲು ಹೋಗಿದ್ದ ಯುವಕರು ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ತಹಶೀಲ್ದಾರ್ ಗಾಂಜಾ ಸಮೇತ ಮೂವರನ್ನು ಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ.

  ಅನೈತಿಕ ತಾಣವಾಗಿರುವ ಗುಳ್ಮಿ:

ಗುಳ್ಮಿ ಪ್ರದೇಶವು ಅತ್ಯಂತ ಹಿಂದುಳೀದ ಪ್ರದೇಶವಾಗಿದ್ದು ಹೆಚ್ಚಿನವರು ಅನಕ್ಷರಸ್ಥರಾಗಿ ಹೊರಗಡೆಯಿಂದ ಭಟ್ಕಳಕ್ಕ ಬಂದು ದುಡಿಮೆ ಮಾಡಿಕೊಂಡು ಬದುಕುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಮಹಿಳೆಯರು ಹಾಗೂ ಯುವಕರು ಬಡವರ ಬಡತನ ಹಾಗೂ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಗಾಂಜಾ ಅಫೀಮು ಮತ್ತಿತರರ ಅಮಲು ಪದಾರ್ಥಗಳ ದಾಸರನ್ನಾಗಿ ಪರಿವರ್ತಿಸಿ ,  ತಮ್ಮ ವ್ಯಾಪಾರವನ್ನು ಕುದುರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

 ಶನಿವಾರ ತಡರಾತ್ರಿ ಬೈಕ್ ಸ್ಕಿಡ್ ಆಗಿ ಮೃತ ಪಟ್ಟ ಯುವಕನ ಸಂಗಡ ಇದ್ದವರು ನೀಡಿದ ಮಾಹಿತಿಯನ್ವಯ ಗುಳ್ಮಿಯಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎನ್ನುವುದನ್ನು ತಿಳಿದು ಕೊಂಡ ಕೆಲ ಯುವಕರು ಸಂಜೆ ವೇಳೆ ಗಾಂಜಾ ಖರೀದಿಸುವ ನೆಪದಲ್ಲಿ ಪತ್ತೆ ಹಚ್ಚಿದ್ದಾರೆನ್ನಲಾಗಿದ್ದು ,  ತಕ್ಷಣ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ   ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News