ತಾಲೂಕು ಕಚೇರಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ

Update: 2016-12-19 13:30 GMT

ಮಂಗಳೂರು, ಡಿ.19: ತಾಲೂಕು ಕಚೇರಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದಿನ ಸಭೆಗಳಲ್ಲಿ ಅನೇಕ ಬಾರಿ ಪ್ರಸ್ತ್ತಾಪಿಸಲಾಗಿದೆ. ಈವರೆಗೂ ಇದರ ಬಗ್ಗೆ ಕ್ರಮಕೈಗೊಂಡಿಲ್ಲ. 1999ರಲ್ಲಿ ನೀಡಿರುವ ಹಕ್ಕುಪತ್ರದಲ್ಲಿ ಎಲ್.ಎನ್.ಡಿ.ಆರ್ ಸಂಖ್ಯೆ ಕೂಡ ಇಲ್ಲ. ಇದರಿಂದಾಗಿ ಸರಕಾರಿ ಸವಲತ್ತು ಪಡೆಯಲು ತೊಂದರೆಯಾಗುತ್ತ್ತಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ರಮೇಶ್ ಸಾಲಿಯಾನ್ ಹೇಳಿದರು.

ತಹಶೀಲ್ದಾರ್ ಮಹದೇವಯ್ಯರ ಅಧ್ಯಕ್ಷತೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹದೇವಯ್ಯ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಲ್ಲಿ ವಿಳಂಬಕ್ಕೆ ಅವಕಾಶ ನೀಡದಂತೆ ಕ್ರಮ ಕೈ ಗೊಳ್ಳಲಾಗುತ್ತಿದೆ. ಸರಕಾದ ಆದೇಶದಂತೆ ಮನೆ ನಿವೇಶನಕ್ಕೆ ಸಂಬಂಧಿಸಿದಂತೆ ಹೊಸದಾಗಿ ಹಕ್ಕುಪತ್ರ ನೀಡಲು ಗ್ರಾಪಂಗಳು ಮಾತ್ರ ಅಧಿಕಾರ ಇದೆ ಎಂದರು.

 ಈ ಹಿಂದೆ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರವಿಲ್ಲದಿದ್ದಲ್ಲಿ ಹೊಸದಾಗಿ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ ಮಹದೇವಯ್ಯ, 1999ರಲ್ಲಿ ನೀಡಿರುವ ಹಕ್ಕುಪತ್ರದಲ್ಲಿ ಎಲ್.ಎನ್.ಡಿ.ಆರ್ ಸಂಖ್ಯೆಯನ್ನು ದಾಖಲಿಸಲು ಕ್ರಮಕೈಗೊಳಲಾಗುವುದು ಎಂದು ತಿಳಿಸಿದರು.

ಅಡ್ಯಾರ್ ಗ್ರಾಪಂನಲ್ಲಿ 6.61 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಡಿಸಿಯವರಿಗೆ ಮನವಿ ಮಾಡಲಾಗಿದೆ. ಇದರಲ್ಲಿ 2.80ಎಕ್ರೆ ಜಾಗ ಅಂಬೇಡ್ಕರ್ ಭವನಕ್ಕೆ ಮೀಸಲಿಡಲಾಗಿದೆ. ಉಳಿದ ಜಾಗದವನ್ನು ಬೇರೆಯವರು ಅತಿಕ್ರಮಣ ಮಾಡುತ್ತಿದ್ದು, ಈ ಜಾಗವನ್ನು ಸ್ಮಶಾನಕ್ಕೆ ಕಾದಿರಿಸಬೇಕು ಎಂದು ಸಂಘಟನೆಯ ಪದಾಧಿಕಾರಿ ರಮೇಶ್ ಕೋಟ್ಯಾನ್ ತಹಶೀಲ್ದಾರರಿಗೆ ಮನವಿ ಮಾಡಿದರು. ಈ ಕುರಿತು ಕ್ರಮ ಕೈ ಗೊಳ್ಳಲಾಗುಬವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.

ಸುರತ್ಕಲ್, ಕಾವೂರು ಕಡೆಯ ಜನಸಮಾನ್ಯರಿಗೆ ಯಾವುದೇ ದಾಖಲೆಗಳನ್ನು ಪಡೆಯಲು ಮಂಗಳೂರಿನಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಬರಬೇಕಾಗಿದೆ. ಇದು ತುಂಬ ದೂರವಾಗುವುದರಿಂದ ಸಮಸ್ಯೆಯಾಗುತ್ತಿದೆ. ಕೂಡಲೆ ಸುರತ್ಕಲ್‌ನಲ್ಲಿ ನೆಮ್ಮದಿ ಕೇಂದ್ರವನ್ನು ತೆರೆಯುವಂತೆ ರಮೇಶ್ ಕೋಟ್ಯಾನ್ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್, ಇದು ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ. ನೆಮ್ಮದಿ ಕೇಂದ್ರದ ಬದಲು ಪ್ರತಿ ಗ್ರಾಮಮಟ್ಟದಲ್ಲಿ ಬಾಪೂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.

ಅತ್ತಾವರ ಗ್ರಾಮದ ನಂದಿಗುಡ್ಡದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮುಸ್ಲಿಮ್ ಸಮಾಜದ ದಫನಭೂಮಿಗೆ ಜಾಗ ಮೀಸಲಿರಿಸಿರುವ ಬಗ್ಗೆ ದಲಿತ ಸಂಘಟನೆಯ ಮುಖಂಡರು ಮಾಹಿತಿ ಕೋರಿದರು. ಮುಸ್ಲಿಮ್ ಸಮಾಜದವರಿಗೆ ಇದನ್ನು ಮೀಸಲಿರಿಸಿಲ್ಲ ಎಂದು ಕಂದಾಯ ಅಧಿಕಾರಿ ಸ್ಪಷ್ಟನೆ ನೀಡಿದಾಗ, ಈ ಬಗ್ಗೆ ಹಿಂಬರಹ ನೀಡುವಂತೆ ಮುಖಂಡರು ಕೋರಿದರು.

ದಲಿತ ಸಂಘಟನೆಯ ಮುಖಂಡರಾದ ವಿಶುಕುಮಾರ್, ಎನ್. ಎನ್. ನಾಯಕ್ ಮತ್ತಿತರರು ಹಲವು ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ಐಎಎಸ್ ಪ್ರೊಬೆಷನರಿ ಗಾಗರ್ಜಿ ಜಯಾ, ಎಎಸ್ಪಿ ರಾಜೇಂದ್ರ ಡಿಎಸ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುನೀತಾ, ಮನಪಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News