ಪಠಾಣಕೋಟ್ ಭಯೋತ್ಪಾದಕ ದಾಳಿ ಪ್ರಕರಣ: ಎನ್‌ಐಎ ಆರೋಪಪಟ್ಟಿಯಲ್ಲಿ ಜೈಷ್ ಮುಖ್ಯಸ್ಥ
ಹೊಸದಿಲ್ಲಿ,ಡಿ.19: ಪಠಾಣಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಇಂದು ಪಂಚಕುಲಾದ ಎನ್‌ಐಎ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ವೌಲಾನಾ ಮಸೂದ್ ಅಝರ್, ಆತನ ಸೋದರ ಮುಫ್ತಿ ರವೂಫ್ ಅಸ್ಗರ್ ಮತ್ತು ದಾಳಿಕೋರರ ನಿರ್ವಾಹಕರಾಗಿದ್ದ ಶಾಹಿದ್ ಲತೀಫ್ ಹಾಗೂ ಕಾಷಿಫ್ ಜಾನ್ ಅವರನ್ನು ದಾಳಿಯ ರೂವಾರಿಗಳೆಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ನಡೆದಿದ್ದ ದಾಳಿಯಲ್ಲಿ ಭದ್ರತಾ ಪಡೆಗಳ ಏಳು ಸಿಬ್ಬಂದಿಳು ಹುತಾತ್ಮರಾಗಿದ್ದರು ಮತ್ತು ಇತರ 37 ಜನರು ಗಾಯಗೊಂಡಿದ್ದರು.
ಎಲ್ಲ ನಾಲ್ವರ ವಿರುದ್ಧ ಐಪಿಸಿ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಅಕ್ರಮ ಚಟುವಟಿಕೆಗಳ(ತಡೆ)ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ. ಆರೋಪಿಗಳ ಪೈಕಿ ಜಾನ್ ಹೊರತುಪಡಿಸಿ ಇತರ ಮೂವರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸುಗಳನ್ನು ಹೊರಡಿಸಿದೆ. ಜಾನ್ ವಿರುದ್ಧ ಈ ಪ್ರಕ್ರಿಯೆ ಬಾಕಿಯಿದೆ ಎಂದು ಎನ್‌ಐಎ ತಿಳಿಸಿದೆ.
ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ಕೇವಲ ನಾಲ್ವರು ಭಯೋತ್ಪಾದಕರ ವಿವರ ಗಳನ್ನು ನೀಡಿರುವುದರಿಂದ ಅವರ ಸಂಖ್ಯೆಯ ಕುರಿತ ಊಹಾಪೋಹಗಳಿಗೆ ಅಂತ್ಯ ಹಾಡಿದಂತಾಗಿದೆ. ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಮತ್ತು ಗೃಹಸಚಿವ ರಾಜನಾಥ ಸಿಂಗ್ ಅವರು ಆರು ಭಯೋತ್ಪಾದಕರಿದ್ದರೆಂದು ಮಾಹಿತಿ ನೀಡಿದ್ದರಿಂದ ಅವರ ಸಂಖ್ಯೆಯ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.
ವ್ಯೆಹಾತ್ಮಕ ಪಠಾಣಕೋಟ್ ವಾಯುನೆಲೆಯಲ್ಲಿ ಭದ್ರತೆಯ ಕೊರತೆಯನ್ನೂ ಆರೋಪಪಟ್ಟಿಯು ಬೆಟ್ಟು ಮಾಡಿದೆ. ನಾಲ್ವರು ಜೈಷ್ ಭಯೋತ್ಪಾದಕರಾದ ನಾಸಿರ್ ಹುಸೇನ್, ಹಫೀಜ್ ಅಬುಬಕರ್, ಉಮರ್ ಫಾರೂಖ್ ಮತ್ತು ಅಬ್ದುಲ್ ಖಯೂಂ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಜ.1ರಂದು ಬೆಳಿಗ್ಗೆ 8:40ಕ್ಕೆ ವಾಯುನೆಲೆ ಆವರಣದೊಳಗೆ ನುಸುಳಿದ್ದರು. ಬಳಿಕ ಚರಂಡಿಯ ಮೂಲಕ ಸಾಗಿ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ ಪಕ್ಕದ ಶೆಡ್ ಪ್ರವೇಶಿಸಿದ್ದರು. ಅಲ್ಲಿಯೇ ಬಚ್ಚಿಟ್ಟುಕೊಂಡಿದ್ದ ಅವರು 19 ಗಂಟೆಗಳ ಬಳಿಕವಷ್ಟೇ ಜ.2ರ ನಸುಕಿನ 3:20 ಗಂಟೆಗೆ ಗುಂಡಿನ ದಾಳಿಯನ್ನು ಆರಂಭಿಸಿದ್ದರು ಎಂದು ಅದು ಹೇಳಿದೆ.
1999ರ ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಒತ್ತೆಯಾಳುಗಳ ಬದಲಾಗಿ ತನ್ನ ಬಂಧನದಲ್ಲಿದ್ದ ಅಝರ್ ಮತ್ತು ಇತರ ಇಬ್ಬರು ಉಗ್ರರನ್ನು ಭಾರತವು ಬಿಡುಗಡೆಗೊಳಿಸಿತ್ತು. ಇದೀಗ ಆತನ ಮೇಲೆ ನಿರ್ಬಂಧ ಹೇರಬೇಕೆಂಬ ತನ್ನ ಆಗ್ರಹಕ್ಕೆ ಪುಷ್ಟಿ ನೀಡಲು ಈ ಆರೋಪಪಟ್ಟಿಯನ್ನು ಭಾರತವು ಬಳಸಿಕೊಳ್ಳುವ ಸಾಧ್ಯತೆಯಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.