ನೋಟು ರದ್ದತಿ: ಆರ್‌ಬಿಐ-ಬ್ಯಾಂಕ್ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ: ಆನಂದ ಶರ್ಮ
ಕೊಚ್ಚಿ, ಡಿ.19: ದೊಡ್ಡ ಮುಖಬೆಲೆಯ ನೋಟು ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರ ವಿನಾಶಕಾರಿ ಕ್ರಮದ ಬಳಿಕ ಜನರು ‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ’ ‘ವಿಶ್ವಾಸ ಕಳೆದುಕೊಂಡಿದ್ದರೆಂದು’ ಕಾಂಗ್ರೆಸ್ ರವಿವಾರ ಆರ್‌ಬಿಐ ಹಾಗೂ ಬ್ಯಾಂಕ್‌ಗಳ ವಿರುದ್ಧ ವಾಗ್ದಾಳಿ ನಡೆಸಿದೆ.
ಕೋಟಿ ಕೋಟಿ ಹೊಸ ನೋಟುಗಳು ಬ್ಯಾಂಕ್‌ಗಳ ಹಿಂಬಾಗಿಲ ಮೂಲಕ ಹೊರಗೆ ಹೋಗುತ್ತಿವೆ. ಆದರೆ, ಈ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿರುವ ತಮ್ಮ ಬೆವರಿನ ಹಣವನ್ನು ಹಿಂಪಡೆಯಲು ಜನಸಾಮಾನ್ಯರಿಗೆ ನಿರಾಕರಿಸಲಾಗುತ್ತಿದೆಯೆಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ವಕ್ತಾರ ಆನಂದ ಶರ್ಮ ಆರೋಪಿಸಿದ್ದಾರೆ.
ಜನರಿಗೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸವಿತ್ತು. ಹಣಕಾಸು ಬಿಕ್ಕಟ್ಟು ಹಾಗೂ 2008-09ರ ಆರ್ಥಿಕ ಬಿಕ್ಕಟ್ಟಿನ ವೇಳೆ ಭಾರತೀಯ ಬ್ಯಾಂಕ್‌ಗಳು ತಮ್ಮ ಸ್ಥಿತಿ ಸ್ಥಾಪಕತ್ವ ಹಾಗೂ ವಿಶ್ವಾಸಾರ್ಹತೆಯನ್ನು ತೋರಿಸಿದ್ದವು. ಭಾರತೀಯ ರಿಸರ್ವ್‌ಬ್ಯಾಂಕ್‌ಗೆ ಅಚ್ಚಳಿಯದ ವರ್ಚಸಿತ್ತು. ಇಂದು ಭಾರತೀಯ ಬ್ಯಾಂಕ್‌ಗಳ ಮೇಲಿನ ಜನರ ವಿಶ್ವಾಸ ಚಿಂದಿಯಾಗಿದೆ. ಆರ್‌ಬಿಐಯ ವರ್ಚಸ್ಸಿಗೆ ಧಕ್ಕೆಯಾಗಿದೆಯೆಂದು ಅವರು ಕೊಚ್ಚಿಯಲ್ಲಿ ಪತ್ರಕರ್ತರೊಡನೆ ಹೇಳಿದರು.
ಅದೇಕೆಂದು ತಾನು ಹೇಳುತ್ತೇನೆ. ಕಠಿಣ ದುಡಿಮೆ ಮಾಡಿದ ಜನರು ಸಣ್ಣ ಸಣ್ಣ ಠೇವಣಿಗಳನ್ನಿರಿಸಿದ್ದಾರೆ. ಬ್ಯಾಂಕ್‌ನಲ್ಲಿ ಹಣವಿರಿಸಿದರೆ ಅದು ಸುರಕ್ಷಿತವಾಗಿರುತ್ತದೆಂಬ ಭರವಸೆ ಅವರಲ್ಲಿರುತ್ತದೆ. ಅಗತ್ಯವಿದ್ದಾಗ ಬ್ಯಾಂಕ್‌ಗೆ ಹೋಗಿ ಹಣ ಪಡೆಯಬಹುದೆಂದು ನಂಬಿರುತ್ತಾರೆ. ಆದರೆ ಬ್ಯಾಂಕ್ ಆ ಹಣವನ್ನು ಕೊಡುತ್ತಿಲ್ಲ. ಏಕೆಂದರೆ ನಗದು ಲಭ್ಯವಿಲ್ಲ. ಲಭ್ಯವಿರುವ ಹಣವು ಬ್ಯಾಂಕ್ ಕೌಂಟರ್‌ಗಳಿಂದ ಬರುವುದಿಲ್ಲ. ಎಟಿಎಂಗಳು ಬರಿದಾಗಿವೆ. ಹಿಂಬಾಗಿಲಿನಿಂದ ಕೋಟಿ ಕೋಟಿಯ ಹೊಸ ನೋಟುಗಳು ಹೊರ ಹೋಗುತ್ತಿವೆ. ಹಾಗಿರುವಾಗ ಜನರು ವಿಶ್ವಾಸವಿರಿಸಲು ಹೇಗೆ ಸಾಧ್ಯ? ಎಂದು ಶರ್ಮ ಪ್ರಶ್ನಿಸಿದರು.
ಈ ವಿಶ್ವಾಸವನ್ನು ಮರಳಿ ಗಳಿಸಬೇಕಾದರೆ ಭಾರತೀಯ ಬ್ಯಾಂಕ್‌ಗಳಿಗೆ ಬಹಳ ಕಾಲ ಬೇಕೆಂದು ಅವರು ಹೇಳಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.