×
Ad

ಮುಸ್ಲಿಮರ ಪ್ರತ್ಯೇಕ ದಾಖಲೆಗೆ ಗೂಗಲ್, ಆ್ಯಪಲ್, ಉಬರ್ ಕೂಡ ವಿರೋಧ

Update: 2016-12-19 21:11 IST

ವಾಶಿಂಗ್ಟನ್, ಡಿ. 19: ಮುಸ್ಲಿಮರ ಪ್ರತ್ಯೇಕ ದಾಖಲೆಯನ್ನು ತಯಾರಿಸುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಯೋಜನೆಗೆ ನೆರವು ನೀಡುವುದಿಲ್ಲ ಎಂದು ಜಾಗತಿಕ ತಂತ್ರಜ್ಞಾನ ದೈತ್ಯರಾದ ಗೂಗಲ್ ಮತ್ತು ಆ್ಯಪಲ್ ಹಾಗೂ ಬಾಡಿಗೆ ಕ್ಯಾಬ್ ಆ್ಯಪ್ ಕಂಪೆನಿ ಉಬರ್ ಘೋಷಿಸಿವೆ.

ಈ ಯೋಜನೆಗೆ ತಮ್ಮ ಬೆಂಬಲವಿಲ್ಲ ಎಂಬುದಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಈಗಾಗಲೇ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಮುಸ್ಲಿಮರ ಪ್ರತ್ಯೇಕ ದಾಖಲೆಯನ್ನು ತಯಾರಿಸುವ ಯೋಜನೆಗೆ ನಾವು ಬೆಂಬಲ ನೀಡುತ್ತೇವೆಯೇ ಎನ್ನುವ ಕಲ್ಪಿತ ಪ್ರಶ್ನೆಗೆ ನಾವು ಹೇಳುವುದೇನೆಂದರೆ, ನಾವು ಅದನ್ನು ಮಾಡುವುದಿಲ್ಲ. ಈ ಬಗ್ಗೆ ನಮ್ಮನ್ನು ಯಾರೂ ಕೇಳಿಲ್ಲ. ನಮ್ಮ ತಿಳುವಳಿಕೆಯ ಮಟ್ಟಿಗೆ ಹೇಳುವುದಾದರೆ ಅಂಥ ಯಾವುದೇ ಪ್ರಸ್ತಾಪ ಬರುವ ಸಾಧ್ಯತೆಯೂ ಇಲ್ಲ’’ ಎಂದು ಗೂಗಲ್ ವಕ್ತಾರರೋರ್ವರನ್ನು ಉಲ್ಲೇಖಿಸಿ ‘ಬಝ್‌ಫೀಡ್’ ಶನಿವಾರ ವರದಿ ಮಾಡಿದೆ.

‘‘ಆದರೆ, ಈ ಯೋಜನೆಯಲ್ಲಿ ಭಾಗವಹಿಸಿ ಎಂದು ಯಾವತ್ತಾದರೂ ನಮ್ಮನ್ನು ಕೇಳಿದರೆ, ಖಂಡಿತವಾಗಿಯೂ ನಾವು (ಗೂಗಲ್) ಅದನ್ನು ಮಾಡುವುದಿಲ್ಲ’’ ಎಂದು ವಕ್ತಾರರು ಹೇಳಿದರು.

‘‘ಜನರು ಏನನ್ನು ಪೂಜಿಸುತ್ತಾರೆ, ಅವರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರನ್ನು ಪ್ರೀತಿಸುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಜನರನ್ನು ಸಮಾನವಾಗಿ ಕಾಣಬೇಕು ಎಂಬುದಾಗಿ ಆ್ಯಪಲ್ ಭಾವಿಸುತ್ತದೆ’’ ಎಂದು ಆ್ಯಪಲ್ ವಕ್ತಾರರೊಬ್ಬರು ಹೇಳಿದರು.

‘‘ಹೀಗೆ ಮಾಡಿ ಎಂದು ನಮಗೆ ಯಾರೂ ಹೇಳಿಲ್ಲ. ಆದರೆ, ಇಂಥ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ’’ ಎಂದರು.

ಉಬರ್ ಕೂಡ ಟ್ರಂಪ್‌ರ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News