ರೌಡಿ ವರ್ವಾಡಿಯ ಪ್ರವೀಣ್ ಕುಲಾಲ್ ಬರ್ಬರ ಹತ್ಯೆ

Update: 2016-12-19 16:18 GMT

ಉಡುಪಿ, ಡಿ.19: ಹಿರಿಯಡಕ ಸಮೀಪದ ಕೊಟ್ನಕಟ್ಟೆ ಎಂಬಲ್ಲಿ ಮೂವರ ತಂಡವೊಂದು ರೌಡಿ ಪೆರ್ಣಂಕಿಲ ಸಮೀಪದ ವರ್ವಾಡಿಯ ಪ್ರವೀಣ್ ಕುಲಾಲ್(32) ಎಂಬಾತನನ್ನು ತಲವಾರಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.

ಕೊಲೆ ಆರೋಪಿಗಳನ್ನು ಸಂತೋಷ್ ಪುತ್ತಿಗೆ, ಉಡುಪಿಯ ಲತೀಶ್ ಹಾಗೂ ಒಂತಿಬೆಟ್ಟುವಿನ ಸಂತೋಷ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ಸಂತೋಷ್ ಪುತ್ತಿಗೆ ಹಾಗೂ ಲತೀಶ್‌ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು, ಒಂತಿಬೆಟ್ಟು ಸಂತೋಷ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.ಇವರೆಲ್ಲರು ಒಂದೇ ತಂಡದವರಾಗಿದ್ದಾರೆ.

ಕೋಟ್ನಕಟ್ಟೆಯ ದಿಯಾ ಗಾರ್ಡನ್ ಬಾರ್‌ನಲ್ಲಿ ಅಪರಾಹ್ನ 12:00 ಸುಮಾರಿಗೆ ಮಧ್ಯ ಸೇವಿಸುತ್ತಿದ್ದ ಸಂತೋಷ್ ಪುತ್ತಿಗೆ ಹಾಗೂ ಪ್ರವೀಣ್ ಕುಲಾಲ್ ನಡುವೆ ಜಗಳ ನಡೆಯಿತು. ಜಗಳ ತಾರಕ್ಕೇರಿದ ಹಿನ್ನೆಲೆಯಲ್ಲಿ ಬಾರ್ ಮಾಲಕರು ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿ ಅವರನ್ನು ಅಲ್ಲಿಂದ ಹೊರಗೆ ಕಳುಹಿಸಿದರು. ನಂತರ ಇವರು ಅಲ್ಲೇ ಸಮೀಪದ ಅಂಗಡಿಯೊಂದರ ಮುಂದೆ ಜಗಳ ಮಾಡುತ್ತಿದ್ದಾಗ ಮೊದಲೇ ಯೋಜನೆ ಹಾಕಿ ಕಾದು ಕುಳಿತಿದ್ದ ಲತೀಶ್ ಹಾಗೂ ಸಂತೋಷ್ ಒಂತಿಬೆಟ್ಟು ಅಲ್ಲಿಗೆ ಬೈಕಿನಲ್ಲಿ ಬಂದರು. ಬಳಿಕ ಈ ಮೂವರು ಜೊತೆಯಾಗಿ ಸೇರಿ ಪ್ರವೀಣ್ ಕುಲಾಲ್ ಮೇಲೆ ತಲವಾರಿನಿಂದ ದಾಳಿ ನಡೆಸಿದರು. ಸುಮಾರು 10-15 ನಿಮಿಷಗಳ ಕಾಲ ಆತನ ತಲೆ ಹಾಗೂ ದೇಹದ ಇತರ ಭಾಗಗಳನ್ನು ಪ್ರಾಣ ಹೋಗುವವರೆಗೆ ಕೊಚ್ಚಿದ ನಂತರ ಅಲ್ಲಿಂದ ಪರಾರಿಯಾದರು. ಗಂಭೀರವಾಗಿ ಗಾಯಗೊಂಡ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟರು.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಹಿಂದೆ ಪ್ರವೀಣ್ ಕುಲಾಲ್ ಈ ಮೂವರನ್ನು ಕೊಲೆ ಮಾಡುವು ದಾಗಿ ಹೇಳಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಪ್ರವೀಣ್ ನಮ್ಮನ್ನು ಮುಗಿಸುವ ಮೊದಲೇ ನಾವು ಆತನನ್ನು ಮುಗಿಸುವ ಯೋಜನೆ ಹಾಕಿ ಕೊಲೆ ಮಾಡಿದ್ದೇವೆ ಎಂದು ಪೊಲೀಸರ ವಶದಲ್ಲಿರುವ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರವೀಣ್ ಕುಲಾಲ್ ವಿರುದ್ಧ ಕಾರ್ಕಳ, ಮಣಿಪಾಲ, ಶಿರ್ವ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಕೊಲೆ, ಹಫ್ತಾ ವಸೂಲಿ, ಬೆದರಿಕೆ, ಕಳ್ಳತನ, ಹಲ್ಲೆ ಸಹಿತ ಒಟ್ಟು 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2013ರ ಡಿಸೆಂಬರ್ ತಿಂಗಳಲ್ಲಿ ನಡೆದ ಕಾರ್ಕಳದ ಸುಲೈಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಈತ, 2014ರಲ್ಲಿ ಶಿರ್ವ ಕಟ್ಟಿಂಗೇರಿಯ ಬಾರ್ ಮಾಲಕರಲ್ಲಿ ಹಫ್ತಾ ವಸೂಲಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ. 2015ರಲ್ಲಿ ಈತ ಗೂಂಡಾ ಕಾಯಿದೆಗೆ ಒಳಪಟ್ಟಿದ್ದನು. ಪರ್ಕಳದ ಸೆಲೂನು ಮಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕೂಡ ಈತನ ವಿರುದ್ಧ ದಾಖಲಾಗಿತ್ತು. 2016ರ ಜುಲೈನಲ್ಲಿ ಸುಲೈಮಾನ್ ಕೊಲೆ ಪ್ರಕರಣಕ್ಕಾಗಿ ನೀಡಬೇಕಾಗಿದ್ದ ಹಣದ ವಿಚಾರದಲ್ಲಿ ಬಜರಂಗದಳದ ಮುಖಂಡರ ಕೊಲೆಗೆ ಯತ್ನ ನಡೆಸಿರುವ ಬಗ್ಗೆ ಕಾರ್ಕಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News