×
Ad

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 401 ಕೋಟಿ ರೂ.ಅನುದಾನ ಮಂಜೂರು

Update: 2016-12-19 22:35 IST

ಉಡುಪಿ, ಡಿ.19: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2016- 17ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 401.10 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡ್ಸೆಂಪ್ ಯೋಜನೆಯಡಿ ಒಟ್ಟು 320.10 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾಗಿ ನೀಡಲಾಗಿದೆ. ಇವುಗಳಲ್ಲಿ ಉಡುಪಿ ನಗರಸಭೆ ವ್ಯಾಪ್ತಿಗೆ ಶೀಂಬ್ರ ಅಣೆಕಟ್ಟು ನಿರ್ಮಾಣಕ್ಕೆ 33 ಕೋಟಿ ರೂ., ನೀರು ಸರಬರಾಜು ಕಾಮಗಾರಿಗಳಿಗೆ 101.20 ಕೋಟಿ ರೂ. ಹಾಗೂ ಒಳಚರಂಡಿ ಕಾಮಗಾರಿಗಳಿಗೆ 185.90 ಕೋಟಿ ರೂ.ಗಳು ದೊರಕಲಿವೆ ಎಂದವರು ನುಡಿದರು.

ಇನ್ನುಳಿದಂತೆ ಸಿಆರ್‌ಎಫ್ ಯೋಜನೆಯನ್ವಯ 33 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ಆಧುನೀಕರಣ ಮತ್ತು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 5 ಕೋಟಿ ರೂ., ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮಗಳ 3ನೇ ಹಂತದ ನಗರೋತ್ಥಾನ ಯೋಜನೆಯಡಿ ಉಡುಪಿ ನಗರಸಭೆಗೆ 35 ಕೋಟಿ ರೂ., 2016ರಲ್ಲಿ ನಡೆದ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಅನುದಾನ ಮೂರು ಕೋಟಿ ರೂ. ಹಾಗೂ ಉಡುಪಿ ನಗರಸಭಾ ವ್ಯಾಪ್ತಿಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಾಲನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಕೇಂದ್ರ ರಸ್ತೆ ನಿಧಿಯಡಿ ಮಂಜೂರಾಗಿರುವ 33 ಕೋಟಿ ರೂ.ಗಳಲ್ಲಿ ಉಪ್ಪೂರು- ಹಾವಂಜೆ- ಕೊಳಲಗಿರಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಅಂಬಾಗಿಲು- ಶಿವಳ್ಳಿ-ಮಣಿಪಾಲ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಪೇತ್ರಿ- ಚೇರ್ಕಾಡಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಹೊಸೂರು-ಪೆಜಮಂಗೂರು ರಸ್ತೆ ಅಭಿವೃದ್ಧಿಗೆ 7ಕೋಟಿ ರೂ. ಹಾಗೂ ಹೊರ್ಲಾಳಿ ಬಳಿ ಸೀತಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರಾಗಿದೆ ಎಂದರು.

ಕ್ಷೇತ್ರದ ಹಾವಂಜೆ ಕಿಳಿಂಜೆ ಗ್ರಾಮದ ಮದ್ಮಲ್ ಕೆರೆಗೆ 40 ಲಕ್ಷ ರೂ., ಕುಂಜಾಲು ಆರೂರು ಗ್ರಾಮದ ಬೆಳ್ಮಾರು ಸರಕಾರಿ ಕೆರೆಗೆ 30 ಲಕ್ಷ ರೂ., ಪರ್ಕಳದ ಮಹಾಲಿಂಗೇಶ್ವರ ದೇವಸ್ಥಾನ ಕೆರೆಗೆ 60 ಲಕ್ಷ ರೂ. ಹಾಗೂ ಹಂದಾಡಿ ಗ್ರಾಮದ ಬೆಣ್ಣೆಕುದ್ರು ತಾವರೆಕೆರೆ ಅಭಿವೃದ್ಧಿಗೆ 30 ಲಕ್ಷ ರೂ. ಸೇರಿ ಒಟ್ಟು 1.60 ಕೋಟಿ ರೂ.ಮೀಸಲಾಗಿದೆ ಎಂದರು.

ಕೊಕ್ಕರ್ಣೆ ಸೂರಾಲು ಬಳಿ, ಹಂದಾಡಿ ಕುಮ್ರಗೋಡು, ಹಾರಾಡಿ ಬೈಕಾಡಿ, ಕಡೇಕಾರು ಕೊಳ, ಚಾಂತಾರು ಗ್ರಾಮ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 3.40 ಕೋಟಿ ರೂ.ಮಂಜೂರಾಗಿದೆ.

ಕುಡ್ಸೆಂಪ್ ಯೋಜನೆಯಡಿ ಮಣಿಪಾಲ, ವಿ.ಪಿ.ನಗರ, ಮಂಚಿ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಕೊಳಂಬೆ, ಇಂದ್ರಾಳಿ, ಕಕ್ಕುಂಜೆ, ಸಂತೆಕಟ್ಟೆ ಮುಂತಾದ ಕಡೆಗಳಲ್ಲಿ ನೀರಿನ ಟ್ಯಾಂಕ್‌ಗಳ ನಿರ್ಮಾಣವಾಗಲಿದೆ. ಒಳಚರಂಡಿ ಕಾಮಗಾರಿಗಳಿಗೆ ಒಟ್ಟು ಎಂಟು ವಲಯಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪ್ರಮೋದ್ ತಿಳಿಸಿದರು.

ಮೊದಲ ಹಂತದಲ್ಲಿ ಒಂದರಿಂದ ಆರನೇ ವಲಯಗಳಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗುವುದು.ಇದರ ಒಟ್ಟು ಉದ್ದ 142.60ಕಿ.ಮೀ.. ಆಗಿರುತ್ತದೆ. ಇದರಲ್ಲಿ ಐದು ಹೊಸ ವೆಟ್‌ವೆಲ್‌ಗಳ ನಿರ್ಮಾಣ ಹಾಗೂ ಮೂರು ಹಳೆ ವೆಟ್‌ವೆಲ್‌ಗಳ ಪುನರ್‌ನಿರ್ಮಾಣ ಸೇರಿವೆ.
ಎರಡು ಹಂತಗಳಲ್ಲಿ ಪೂರ್ಣಗೊಳ್ಳುವ ಕಾಮಗಾರಿಗಾಗಿ ಒಟ್ಟು 11.02 ಎಕರೆ ಪ್ರದೇಶದ ಅಗತ್ಯವಿದ್ದು, ಇವುಗಳಲ್ಲಿ 0.86 ಎಕರೆ ಸರಕಾರಿ ಭೂಮಿಯಾಗಿದ್ದರೆ, ಉಳಿದ 10.15 ಎಕರೆ ಖಾಸಗಿ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದರು.


ನರ್ಮ್ ಬಸ್‌ಗೆ ಸಮಯ ನಿಗದಿ:

ಉಡುಪಿಗೆ ಬಂದಿರುವ ಎಲ್ಲಾ ನರ್ಮ್ ಬಸ್‌ಗಳಿಗೆ ಆರ್‌ಟಿಓ ಇನ್ನೂ ಸಮಯ ನಿಗದಿ ಪಡಿಸಿಲ್ಲ. ಹೀಗಾಗಿ ಕೆಲವೇ ಬಸ್‌ಗಳು ಓಡಾಡುತ್ತಿವೆ. ಶೀಘ್ರವೇ ಎಲ್ಲರ ಸಭೆಗೆ ಕರೆದು ನರ್ಮ್ ಬಸ್‌ಗಳ ಸಮಸ್ಯೆಗಳನ್ನು ತಿಳಿದು ಇನ್ನಷ್ಟು ಬಸ್ ಓಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಕ್ರೀಡಾನೀತಿ ತಯಾರಿಗಾಗಿ ಸಮಾಲೋಚನಾ ಸಭೆ ಮುಗಿದಿದ್ದು, ಕರಡು ಪ್ರತಿ ಸಿದ್ಧಗೊಳ್ಳುತ್ತಿದೆ. ಮುಂದಿನ ಅಧಿವೇಶನದಲ್ಲಿ ಸಾಧ್ಯವಾದರೆ ಅದನ್ನು ಮಂಡಿಸಲು ಪ್ರಯತ್ನಿಸಲಾಗುವುದು. ಕ್ರೀಡಾನೀತಿಗೆ ಮುನ್ನ ವಿವಿಧ ಇಲಾಖೆ ಗಳೊಂದಿಗೂ ಚರ್ಚೆ ನಡೆಸಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News