ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳ ಉದ್ಘಾಟನೆ

Update: 2016-12-19 17:22 GMT

ಮಂಗಳೂರು, ಡಿ.19: ನಗರದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳವನ್ನು ಕರ್ನಾಟಕ ಜೆಸ್ವಿಟ್ ಪ್ರಾವಿನ್ಸ್‌ನ ಪ್ರೊವಿನ್ಶಿಯಲ್ ರೆ.ಡಾ. ಜೆರೋಮ್ ಸ್ಟಾನಿಸ್ಲಸ್ ಡಿಸೋಜ ಸೋಮವಾರ ಉದ್ಘಾಟಿಸಿದರು.

 ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಆಯ್ಕೆಯ ಸಮಸ್ಯೆಯಿದೆ. ಸರಕಾರ ನೇಮಕಾತಿಗೆ ಅವಕಾಶ ನೀಡುತ್ತಿಲ್ಲ. ಇದನ್ನು ಕ್ಯಾಬಿನೆಟ್ ಸಭೆಯಲ್ಲಿ ಸಚಿವರು ಚರ್ಚಿಸಬೇಕು ಎಂದು ಮನವಿ ಮಾಡಿದರು.

 ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವುದೇ ನಿಜವಾದ ದೇಶಪ್ರೇಮವಾಗಿದೆ. ದೇಶ ಉದ್ಧಾರ ಮಾಡುತ್ತೇವೆ ಎಂದು ಕೇವಲ ಮಂತ್ರಿ, ಶಾಸಕರು ಭಾಷಣ ಮಾಡಿದರೆ, ಅಧಿಕಾರಿಗಳು ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡಿದರೆ ಸಾಧ್ಯವಾಗುವುದಿಲ್ಲ. ಬದಲಾಗಿ ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಬಲಿಷ್ಟರನ್ನಾಗಿ ಮಾಡಿದರೆ ದೇಶ ಉದ್ಧಾರವಾಗುತ್ತದೆ. ಶಿಕ್ಷಣದ ಜತೆಗೆ ದೈಹಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಕ್ರೀಡೆ ಪೂರಕವಾಗುತ್ತದೆ ಎಂದು ಹೇಳಿದರು.

ಇತರ ರಾಜ್ಯ, ಜಿಲ್ಲೆಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಸಂಸ್ಥೆಗಳಿವೆ. ಒಂದು ಜಿಲ್ಲೆ ಶೈಕ್ಷಣಿಕವಾಗಿ ಬೆಳೆವಣಿಗೆಯಾಗದಿದ್ದರೆ, ಅಲ್ಲಿಗೆ ಸಾವಿರ ಕೋಟಿ ರೂ.ಅನುದಾನ ನೀಡಿದರೂ ಆ ಜಿಲ್ಲೆ ಅಭಿವೃದ್ಧಿಯಾಗುವುದಿಲ್ಲ ಎಂದು ಖಾದರ್ ತಿಳಿಸಿದರು.

ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಜೆ. ಅಲೆಕ್ಸಾಂಡರ್, ಸಾಕಾ ಅಧ್ಯಕ್ಷ ಅರ್ಚಿಬಾಲ್ಡ್ ಮೆನೇಝಸ್, ಸ್ವಿಮ್ಮಿಂಗ್ ಪೂಲ್ ಸಮಿತಿಯ ಸಂಚಾಲಕ ಎನ್.ಜಿ. ಮೋಹನ್, ಹಳೇ ವಿದ್ಯಾರ್ಥಿ ಟೆರೆನ್ಸ್ ಡೆಸಾ ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ರೆಕ್ಟರ್ ಫಾ. ಡಿಯೊನಿಯಸ್ ವಾಸ್ ಸ್ವಾಗತಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News