×
Ad

ಶ್ರೀನಿವಾಸ ಮಲ್ಯರ ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆಗೊಳ್ಳಲಿ: ವಿನಯ ಹೆಗ್ಡೆ

Update: 2016-12-19 23:26 IST

ಮಂಗಳೂರು, ಡಿ.19: ನಾಡಿನ ಅಪರೂಪದ ರಾಜಕೀಯ ಮುತ್ಸದ್ದಿ ಹಾಗೂ ದೇಶದ ಶ್ರೇಷ್ಠ ನಾಯಕರಲ್ಲೊಬ್ಬರಾಗಿದ್ದ ದಿ. ಉಳ್ಳಾಲ ಶ್ರೀನಿವಾಸ ಮಲ್ಯರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಹೇಳಿದರು.

ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ವಿಶ್ವ ಕೊಂಕಣಿ ಕೇಂದ್ರ ಜಂಟಿ ಆಶ್ರಯದಲ್ಲಿ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ‘ದಿ.ಉಳ್ಳಾಲ ಶ್ರೀನಿವಾಸ ಮಲ್ಯ 51ನೆ ಸ್ಮತಿ ದಿವಸ’ದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಇಂದು ಅನೇಕ ವಿಷಯಗಳಲ್ಲಿ ದೇಶದಲ್ಲೇ ಅತ್ಯುನ್ನತ ಸ್ಥಾನಕ್ಕೆ ತಲುಪಿದ್ದರೆ ಅದಕ್ಕೆ ಮಲ್ಯರು ಪ್ರಮುಖ ಕಾರಣ. ಸುರತ್ಕಲ್ ಎನ್‌ಐಟಿಕೆ, ವಿಮಾನ ನಿಲ್ದಾಣ, ನವಮಂಗಳೂರು ಬಂದರು,ಎಂಸಿಎಫ್, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಸಹಿತ ಜಿಲ್ಲೆಯ ಪ್ರಗತಿಗೆ ಪೂರಕ ಪ್ರಮುಖ ಎಲ್ಲ ಕೆಲಸಗಳು ಅವರ ನೇತೃತ್ವದಲ್ಲಿ ನಡೆದಿವೆ. ಸ್ವಾತಂತ್ರ ಬಳಿಕ ಘಟನಾ ಸಭೆಯ ಸದಸ್ಯನಾಗಿ, ಲೋಕಸಭೆಯಲ್ಲಿ ಸುದೀರ್ಘ 13 ವರ್ಷ ಆಡಳಿತ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕನಾಗಿ ಅವರು ತೋರಿದ ಚಾತುರ್ಯ, ನಾಡಿನ ಅಭಿವೃದ್ಧಿ ಬಗ್ಗೆ ಹೊಂದಿದ್ದ ದೂರದೃಷ್ಟಿ ಹೊಸ ತಲೆಮಾರಿನ ಹೆಚ್ಚಿನ ಜನರಿಗೆ ತಿಳಿದಿಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ತಿಳಿಯಬೇಕು. ಪ್ರೇರಣೆ ಪಡೆಯಬೇಕು ಎಂದ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಅವರ ಹೆಸರಿಡಲು ಕೆಲವರು ತಕರಾರು ತೆಗೆಯುವುದು ತನಗೆ ಆಶ್ಚರ್ಯ ಮೂಡಿಸುತ್ತದೆ. ಶ್ರೀನಿವಾಸ ಮಲ್ಯ ಅವರು ಕೇವಲ ಅವರು ಓರ್ವ ವ್ಯಕ್ತಿಯಲ್ಲ. ಅವರೊಂದು ಸಂಸ್ಥೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಕೆ.ಹರಿನಾಥ್, ಪಡೀಲ್ ಜಂಕ್ಷನ್‌ಗೆ ಶ್ರೀನಿವಾಸ ಮಲ್ಯ ಅವರ ಹೆಸರಿಟ್ಟು, ಪ್ರತಿಮೆ ಸ್ಥಾಪಿಸಲು ಪಾಲಿಕೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶ್ರೀನಿವಾಸ ಮಲ್ಯ ಜೀವನ- ಸಾಧನೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು.

ಕಾರ್ಯದರ್ಶಿ ಪ್ರಭಾಕರ ಪ್ರಭು ವಂದಿಸಿದರು.

ಉಪಾಧ್ಯಕ್ಷ ವೆಂಕಟೇಶ್ ಎನ್.ಬಾಳಿಗಾ ಮತ್ತು ಅಲೆನ್ ಸಿ.ಎ.ಪಿರೇರ ಉಪಸ್ಥಿತರಿದ್ದರು.

ಶಕುಂತಳಾ ಕಿಣಿ ಕಾರ್ಯಕ್ರಮ ನಿರೂಪಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News