ಬೀದಿಮಜಲು: ಹಲ್ಲೆ ಪ್ರಕರಣ; ದೂರು ದಾಖಲು

Update: 2016-12-19 18:49 GMT

ಉಪ್ಪಿನಂಗಡಿ, ಡಿ.19: ಜಾಗದ ಬೇಲಿಯ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆಸಿದ ಪ್ರಕರಣದ ಕುರಿತಾಗಿ ಇತ್ತಂಡಗಳು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ಈ ಬಗ್ಗೆ ನೆಲ್ಯಾಡಿ ಗ್ರಾಮದ ಬೀದಿಮಜಲು ನಿವಾಸಿ ಚೇತನ್ ಕುಮಾರ್ ಎಂಬವರು ತನ್ನ ತಾಯಿ ಸುಮಿತ್ರಾರಿಗೆ ಸೇರಿದ ಜಾಗಕ್ಕೆ ಹಾಕಲಾಗಿದ್ದ ಬೇಲಿಯನ್ನು ಡಿ.18ರಂದು ಮಧ್ಯಾಹ್ನ 12:45ಕ್ಕೆ ರಾಮಚಂದ್ರ ಶೆಟ್ಟಿ, ಅವರ ತಮ್ಮಂದಿರಾದ ಗಿರೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ ಮತ್ತು ಅಳಿಯ ಸಂದೇಶ ಶೆಟ್ಟಿ ಹಾಗೂ ಅಪರಿಚಿತ 10 ಮಂದಿಯ ತಂಡ ತೆರವುಗೊಳಿಸುತ್ತಿತ್ತು. ಇದನ್ನು ಪ್ರಶ್ನಿಸಿದಕ್ಕೆ ಇವರೆಲ್ಲರೂ ಸೇರಿಕೊಂಡು ಕತ್ತಿ, ಕಬ್ಬಿಣದ ಸುತ್ತಿಗೆ ಹಾಗೂ ಅಡಿಕೆ ಮರದ ಸಲಾಕೆಯಿಂದ ನನ್ನ ಹಾಗೂ ತಾಯಿ ಸುಮಿತ್ರಾರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 
ಇದರಿಂದ ಗಾಯಗೊಂಡ ಸುಮಿತ್ರಾ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಆರೋಪಿಗಳು ನಾವು ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ತಿಳಿದು ನಮ್ಮ ಮೇಲೆ ದೌರ್ಜನ್ಯವೆಸಗಿ ದ್ದಾರೆ ಎಂದು ದೂರಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ರಾಮಚಂದ್ರ ಶೆಟ್ಟಿ ಹಾಗೂ ತಂಡದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿ ಆರೋಪಿ ರಾಮಚಂದ್ರ ಶೆಟ್ಟಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೆರೆಯ ಜಾಗದವರಾದ ಸುಮಿತ್ರಾ ಹಾಗೂ ಅವರ ಮಗ ಚೇತನ್ ಹಾಗೂ ಇತರ ಇಬ್ಬರು ಸೇರಿಕೊಂಡು ಬೇಲಿ ಹಾಕಿ ಗಿಡ ನೆಡುತ್ತಿದ್ದರು. ಆಗ ಈ ಬಗ್ಗೆ ವಿಚಾರಿಸಿದ್ದಕ್ಕೆ ಸುಮಿತ್ರಾ ನಿನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆಂದು ಕತ್ತಿಯಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರು ನೀಡಿದ್ದಾರೆ. ಇದರಿಂದ ಗಾಯಗೊಂಡ ನಾನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ದೂರಿದ್ದಾರೆ. ಜಾಗದ ಬೇಲಿ ತಕರಾರಿಗೆ ದಲಿತ ಸಂಘದ ತಾಲೂಕು ಅಧ್ಯಕ್ಷ ಗಿರಿಧರ್ ನಾಯ್ಕ ಅವರೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಸುಮಿತ್ರಾ, ಚೇತನ್, ಗಿರಿಧರ ನಾಯ್ಕ ಹಾಗೂ ಇತರ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News