ಆ್ಯಂಬುಲೆನ್ಸ್-ಬಸ್ ಢಿಕ್ಕಿ: ಓರ್ವ ಗಾಯ
ಬ್ರಹ್ಮಾವರ, ಡಿ.19: ಹೇರೂರು ಸೇತುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಮಧ್ಯಾಹ್ನ 2:30ರ ಸುಮಾರಿಗೆ ಬಸ್ ಹಾಗೂ ಆ್ಯಂಬುಲೆನ್ಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆ್ಯಂಬುಲೆನ್ಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರವು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.
ಗಾಯಗೊಂಡ ಚಾಲಕನನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಹೇರೂರಿನ ಎರಡು ಸೇತುವೆಗಳ ಪೈಕಿ ಒಂದು ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಎರಡು ಬದಿಯ ವಾಹನಗಳ ಸಂಚಾರವನ್ನು ಒಂದೇ ಸೇತುವೆಯಲ್ಲಿ ಬಿಡಲಾಗಿತ್ತು. ರೋಗಿಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿ ವಾಪಸು ಶಿವಮೊಗ್ಗಕ್ಕೆ ಹೋಗುತ್ತಿದ್ದ ಆ್ಯಂಬುಲೆನ್ಸ್‌ಗೆ ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ದುರ್ಗಾಂಬ ಬಸ್ ಎದುರಿನಿಂದ ಢಿಕ್ಕಿ ಹೊಡೆಯಿತು.
ಇದರಿಂದ ಆ್ಯಂಬುಲೆನ್ಸ್‌ನ ಮುಂದಿನ ಭಾಗ ಜಖಂಗೊಂಡು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಇವರನ್ನು ಹೊರಗೆ ತೆಗೆಯಲು ಮುಕ್ಕಾಲು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಸುಮಾರು ಒಂದೂವರೆ ತಾಸಿನ ಬಳಿಕ ಸಂಚಾರ ಸರಿಪಡಿಸಲಾಯಿತು. ಗಾಯಾಳು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.