×
Ad

ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಗೆ ಇಲೆಕ್ಟೊರಲ್ ಕಾಲೇಜಿನ ಮೊಹರು

Update: 2016-12-20 09:16 IST

ವಾಷಿಂಗ್ಟನ್, ಡಿ.20: ಅಮೆರಿಕದ 45ನೆ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಚುನಾಯಿತರಾಗಿರುವುದಕ್ಕೆ ಅಮೆರಿಕದ ಎಲೆಕ್ಟೊರಲ್ ಕಾಲೇಜು ಅಧಿಕೃತ ಮುದ್ರೆ ಹಾಕುವುದರೊಂದಿಗೆ ಈ ಕುರಿತು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಈ ಮೂಲಕ ಟ್ರಂಪ್ ಶ್ವೇತಭವನದ ಹಾದಿಯನ್ನು ತಡೆಯಲು ಟ್ರಂಪ್ ವಿರೋಧಿಗಳು ಮಾಡಿದ ಪ್ರಯತ್ನ ವಿಫಲವಾಗಿದೆ. ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಅಗತ್ಯವಿರುವ 270 ಮತಗಳ ಗಡಿಯನ್ನು ದಾಟಿದ್ದಾರೆ. ಇದನ್ನು ಎಲೆಕ್ಟೊರಲ್ ಕಾಲೇಜು ಮಾನ್ಯಮಾಡಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಜನವರಿ 20ರಂದು ಟ್ರಂಪ್, ಬರಾಕ್ ಒಬಾಮಾ ಅವರ ಉತ್ತರಾಧಿಕಾರಿಯಾಗಲು ಹಾದಿ ಸುಗಮವಾಗಿದೆ.

ಎಲೆಕ್ಟೊರಲ್ ಕಾಲೇಜಿನಿಂದ ನಿಮ್ಮ ಗೆಲುವನ್ನು ಅಧಿಕೃತಗೊಳಿಸಲಾಗಿದ್ದು, ನಿಮಗೆ ಅಭಿನಂದನೆಗಳು ಎಂದು ಉಪಾಧ್ಯಕ್ಷ ಮೈಕ್ ಪೆನೆಸ್ ಟ್ವೀಟ್ ಮಾಡಿದ್ದಾರೆ. ಆಯಾ ರಾಜ್ಯಗಳ ಜನಪ್ರಿಯ ಮತಗಳನ್ನು ಗಳಿಸಿದ್ದರೂ, ದೇಶಾದ್ಯಂತ ಅಧಿಕೃತವಾಗಿ ಅಭ್ಯರ್ಥಿಗೆ ಮತ ಚಲಾಯಿಸುವುದಕ್ಕೆ ಎಲೆಕ್ಟೊರಲ್ ಕಾಲೇಜಿನ ರಬ್ಬರ್ ಸ್ಟ್ಯಾಂಪ್ ಅಗತ್ಯವಿದ್ದು, ಇದು ದೊರಕಿದ್ದರಿಂದ ಟ್ರಂಪ್ ಹಾದಿ ಸುಗಮವಾಗಿದೆ.

ಅಮೆರಿಕದ ಮತದಾರರು ನವೆಂಬರ್ 8ರಂದು ಮತ ಚಲಾಯಿಸಿದ್ದಾರೆ. ಆದರೆ ಅವರು ನೇರವಾಗಿ ಮತದಾನ ಮಾಡದೇ, 538 ಮಂದಿ ಮತದಾರರು ತಮ್ಮ ನಿರೀಕ್ಷೆಯನ್ನು ವಾಸ್ತವವಾಗಿ ಜಾರಿಗೆ ತರುವುದು ಇಲ್ಲಿನ ವ್ಯವಸ್ಥೆ. ವ್ಯಾಪಕ ಪ್ರಚಾರದ ಬಳಿಕ ಟ್ರಂಪ್ ಪರವಾಗಿ 306 ಮತಗಳು ಚಲಾವಣೆಯಾಗಿದ್ದವು. ಜನಪ್ರಿಯ ಟ್ಯಾಲಿಯಲ್ಲಿ ಪ್ರತಿಸ್ಪರ್ಧಿ ಸುಮಾರು 30 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದರೂ, ಎಲೆಕ್ಟೊರಲ್ ಮತದಾನದಲ್ಲಿ ಟ್ರಂಪ್ ಬಹುಮತ ಪಡೆದಿದ್ದರು. ಟ್ರಂಪ್ ಅವರನ್ನು ಅಧ್ಯಕ್ಷ ಪದವಿಯಿಂದ ತಡೆಯಬೇಕಿದ್ದರೆ ಕನಿಷ್ಠ 37 ರಿಪಬ್ಲಿಕನ್ ಮತದಾರರು ತಮ್ಮ ಉಮೇದುವಾರಿಕೆ ರದ್ದುಮಾಡುವುದು ಅಗತ್ಯವಾಗಿತ್ತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News