×
Ad

ದಾಳಿಗೆ ಒಳಗಾದ ರಷ್ಯನ್ ರಾಯಭಾರಿ ನಿಧನ

Update: 2016-12-20 09:21 IST

ಇಸ್ತಾಂಬುಲ್, ಡಿ.20: ಅಂಕಾರದಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನ ವೇಳೆ ರಷ್ಯಾದ ರಾಯಭಾರಿಗೆ ಗುಂಡಿಕ್ಕುವ ಮುನ್ನ ಟರ್ಕಿ ಪೊಲೀಸ್, ’ಅಲೆಪ್ಪೊ’ ಹಾಗೂ ’ಪ್ರತೀಕಾರ’ ಎಂದು ಉದ್ಗರಿಸಿದ್ದು, ಇದನ್ನು ರಷ್ಯಾ, ಉಗ್ರಗಾಮಿ ಚಟುವಟಿಕೆ ಎಂದು ಬಣ್ಣಿಸಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ರಷ್ಯನ್ ರಾಯಭಾರಿ ಅಂಡ್ರೇಯಿ ಕಡೋವ್ ಮೃತಪಟ್ಟಿದ್ದಾರೆ. ಸಿರಿಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಚರ್ಚಿಸಲು ರಷ್ಯಾ, ಟರ್ಕಿ ಹಾಗೂ ಇರಾನಿನ ವಿದೇಶಾಂಗ ಸಚಿವರು ಸಭೆ ನಡೆಸಲು ಉದ್ದೇಶಿಸಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಕಡು ಬಣ್ಣದ ಸೂಟ್ ಹಾಗೂ ಟೈ ಧರಿಸಿದ್ದ ವ್ಯಕ್ತಿ ಅಂಕಾರಾ ವಸ್ತುಪ್ರದರ್ಶನ ಹಾಲ್‌ನಲ್ಲಿ ಗಾಳಿಯಲ್ಲಿ ಬಂದೂಕು ತೋರಿಸಿ, ಈ ದಾಳಿ ಮಾಡಿದ ಟೆಲಿವಿಷನ್ ದೃಶ್ಯಾವಳಿ ಪ್ರಸಾರವಾಗಿದೆ. ತಕ್ಷಣ ಪೊಲೀಸ್ ಕಾರ್ಯಾಚರಣೆಯನ್ನು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಅನಡೊಲು ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿರಿಯಾ ಸಂಘರ್ಷದಲ್ಲಿ ರಷ್ಯಾ ವಹಿಸಿದ ಪಾತ್ರದ ವಿರುದ್ಧ ಟರ್ಕಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಯುದ್ಧಪೀಡಿತ ಅಲೆಪ್ಪೊ ನಗರದಿಂದ ಜನರನ್ನು ಹೊರ ಕಳುಹಿಸಲು ಟರ್ಕಿ ಹಾಗೂ ರಷ್ಯಾ ಇದೀಗ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಂಕಾರಾದ ಮೇಯರ್, ದಾಳಿಕೋರನನ್ನು ಟರ್ಕಿ ಪೊಲೀಸ್ ಎಂದು ಗುರುತಿಸಿದ್ದಾರೆ.

ರಷ್ಯನ್ ರಾಯಭಾರ ಕಚೇರಿ ಸೇರಿದಂತೆ ಹಲವು ರಾಯಭಾರ ಕಚೇರಿಗಳಿರುವ ಕಾಗ್ಡಸ್ ಸನಟಿಯರ್ ಮೆರ್ಕೆಝಿ ಎಂಬ ಕಲಾ ಪ್ರದರ್ಶನ ಹಾಲ್ ಬಳಿ ಈ ದಾಳಿ ನಡೆದಿದೆ. ದಾಳಿಯ ವೇಳೆ ಇಬ್ಬರು ಸೂಟು ಧರಿಸಿದ್ದವರು ಬಿದ್ದಿರುವ ಚಿತ್ರಗಳನ್ನು ಹರಿಯತ್ ದೈನಿಕ ಪ್ರಕಟಿಸಿದೆ. ಕಲಾಪ್ರದರ್ಶನದ ಉದ್ಘಾಟನೆ ಸಮಾರಂಭದ ವೇಳೆ ಈ ದಾಳಿ ನಡೆದಿದೆ ಎಂದು ಸ್ಥಳದಲ್ಲೇ ಇದ್ದ ಪತ್ರಕರ್ತ ಹಸೀಂ ಕಿಲಿಕ್ ಹೇಳಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News