×
Ad

422 ಮಿಲಿಯನ್ ಪಾವತಿ ಪ್ರಕರಣದಲ್ಲಿ ಐಎಂಎಫ್ ಮುಖ್ಯಸ್ಥೆ ತಪ್ಪಿತಸ್ಥೆ

Update: 2016-12-20 09:29 IST

ಪ್ಯಾರಿಸ್, ಡಿ.20: ದೊಡ್ಡ ಉದ್ಯಮಿಯೊಬ್ಬರಿಗೆ 422 ದಶಲಕ್ಷ ಡಾಲರ್ ಪಾವತಿ ಮಾಡಿದ ಪ್ರಕರಣದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡೆ ಅವರನ್ನು ತಪ್ಪಿತಸ್ಥೆ ಎಂದು ಫ್ರಾನ್ಸ್ ಕೋರ್ಟ್ ತೀರ್ಮಾನಿಸಿದೆ. ಲಗಾರ್ಡೆ ಅವರು ಫ್ರಾನ್ಸ್‌ನ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಈ ಅವ್ಯವಹಾರ ನಡೆದಿತ್ತು.

ಸರಕಾರ ಹಾಗೂ ಉದ್ಯಮಿ ಬೆರ್ನಾರ್ಡ್ ಟಪೈ ನಡುವಿನ ವ್ಯಾಜ್ಯವನ್ನು ನಿರ್ವಹಿಸುವ ವೇಳೆ ಲಗಾರ್ಡೆ ಅವರು 422 ದಶಲಕ್ಷ ಡಾಲರ್ ಮೊತ್ತವನ್ನು ಉದ್ಯಮಿಗೆ ನೀಡುವ ಮೂಲಕ ತಪ್ಪು ಎಸಗಿದ್ದಾರೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಈ ದೊಡ್ಡಮೊತ್ತದ ಪಾವತಿಯ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸದ ಲಗಾರ್ಡೆ ಕ್ರಮ ಅವರ ಸಾರ್ವಜನಿಕ ಜೀವನಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈ ತೀರ್ಪಿನಿಂದ ಐಎಂಎಫ್ ಮುಖ್ಯಸ್ಥೆಯಾಗಿರುವ ಅವರ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಐಎಂಎಫ್ ಹಾಗೂ ಫ್ರಾನ್ಸ್ ಸರಕಾರ ಲಗಾರ್ಡೆ ಬೆಂಬಲಕ್ಕೆ ನಿಂತಿವೆ.

ನ್ಯಾಯಾಲಯ ತೀರ್ಪಿನ ಹಿನ್ನೆಲೆಯಲ್ಲಿ ಐಎಂಎಫ್ ಮಂಡಳಿ ವಾಷಿಂಗ್ಟನ್‌ನಲ್ಲಿ ಸಭೆ ಸೇರಲಿದೆ. 60 ವರ್ಷದ ಮಾಲಿ ವಕೀಲೆ, ಜಿ-8 ಸದಸ್ಯ ದೇಶಗಳ ಪೈಕಿ ಮೊಟ್ಟಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2011ರಲ್ಲಿ ಐಎಂಎಫ್ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ತೀರ್ಪಿನ ವೇಳೆ ಲಗಾರ್ಡೆ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಅಡಿಡಾಸ್ ಕ್ರೀಡಾ ಬ್ರಾಂಡ್ ಅನ್ನು ಸರಕಾರಿ ಸ್ವಾಮ್ಯದ ಕ್ರೆಡಿಟ್ ಲೋನಿಸ್‌ಗೆ ಬ್ಯಾಂಕ್‌ಗೆ ಮಾರಾಟ ಮಾಡಿದ ವ್ಯವಹಾರದಲ್ಲಿ ಖಾಸಗಿ ಮಧ್ಯಸ್ಥಿಕೆದಾರರು ಉದ್ಯಮಿಗೆ 422 ದಶಲಕ್ಷ ಡಾಲರ್ ಪಾವತಿಸುವಂತೆ ಸೂಚಿಸಿದ್ದರು. ಇದರ ವಿರುದ್ಧ ಲಗಾರ್ಡೆ ಮೇಲ್ಮನವಿ ಸಲ್ಲಿಸಿಲ್ಲ ಎನ್ನುವುದು ಇವರ ವಿರುದ್ಧದ ಆರೋಪ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News