ಮೈಕಲ್ ಶುಮ್ಯಾಕರ್ ಹಾಸಿಗೆ ಹಿಡಿದಿರುವ ಚಿತ್ರಕ್ಕೆ 7 ಕೋಟಿ ರೂಪಾಯಿ !
ಜಿನೆವಾ,ಡಿ.20: ಫಾರ್ಮ್ಯುಲಾ ಒನ್ ದಂತಕಥೆ, ಫ್ರೆಂಚ್ ಆಲ್ಪ್ಸ್‌ನಲ್ಲಿ ಸ್ಕೀಯಿಂಗ್ ಸಂದರ್ಭದಲ್ಲಿ ಅವಘಡಕ್ಕೆ ಗುರಿಯಾಗಿ ದೇಹವು ಭಾಗಶಃ ನಿಷ್ಕ್ರಿಯಗೊಂಡಿರುವ ಮೈಕಲ್ ಶುಮ್ಯಾಕರ್ ಅವರ ಮೊದಲ ಚಿತ್ರಗಳು ಅವರ ಮನೆಯಿಂದ ಹೊರಗೆ ಕಳ್ಳಸಾಗಣೆ ಯಾಗಿದ್ದು, ಅವುಗಳನ್ನು ಸುಮಾರು ಒಂದು ಮಿಲಿಯನ್ ಡಾಲರ್(6.7 ಕೋ.ರೂ)ಗೆ ಮಾರುವ ಕೊಡುಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ಬಂದಿದೆ.
2013ರಲ್ಲಿ ಸ್ಕೀಯಿಂಗ್ ಮಾಡುತ್ತಿರುವಾಗ ಬಿದ್ದು ಮಿದುಳಿಗೆ ಪೆಟ್ಟು ಮಾಡಿಕೊಂಡಿದ್ದ, ಫಾರ್ಮ್ಯುಲಾ ಒನ್ ರೇಸ್‌ನಲ್ಲಿ ಏಳು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಶುಮ್ಯಾಕರ್ ದೇಹಸ್ಥಿತಿಯ ಬಗ್ಗೆ ಮಾಹಿತಿಯನ್ನು ಗುಟ್ಟಾಗಿಯೇ ಇರಿಸಲಾಗಿದೆ. ಈಗ ಸುದ್ದಿಯಾಗಿರುವ ಚಿತ್ರಗಳು ಅವರ ವೈಯಕ್ತಿಕ ಬದುಕನ್ನು ಉಲ್ಲಂಘಿಸಿವೆ ಎಂದು ಜರ್ಮನಿಯ ಸರಕಾರಿ ಅಭಿಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಗಳನ್ನು ತೆಗೆದಿರುವ ಫೋಟೊಗ್ರಾಫರ್ ಶುಮ್ಯಾಕರ್ ಅವರ ಪರಿಚಯದ ವ್ಯಕ್ತಿಯೇ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
‘ಅಪರಿಚಿತ ವ್ಯಕ್ತಿಯೋರ್ವ ’ ಈ ಚಿತ್ರಗಳನ್ನು ತೆಗೆದಿದ್ದಾನೆ ಮತ್ತು ದುಬಾರಿ ಬೆಲೆಗೆ ಮಾರಾಟ ಮಾಡುವ ಕೊಡುಗೆಯನ್ನು ಮುಂದಿರಿಸಿದ್ದಾನೆ ಎಂದು ಜರ್ಮನಿಯ ಒಫೆನ್‌ಬರ್ಗ್‌ನಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯು ತಿಳಿಸಿದೆ ಎಂದು ಬ್ರಿಟನ್ನಿನ ದೈನಿಕ ’ದಿ ಸನ್ ’ವರದಿ ಮಾಡಿದೆ.
ಶುಮ್ಯಾಕರ್ ಅವಘಡಕ್ಕೆ ಸಿಲುಕಿ ಡಿ.29ಕ್ಕೆ ಭರ್ತಿ ಮೂರು ವರ್ಷಗಳಾಗುತ್ತವೆ. ಅವರ ಆರೋಗ್ಯದ ಬಗ್ಗೆ ವದಂತಿಗಳು ದಟ್ಟವಾಗಿದ್ದು, ಅವರ ಕುಟುಂಬವು ತನ್ನ ಖಾಸಗಿತನವನ್ನು ಉಲ್ಲಂಘಿಸದಂತೆ ನಿರಂತರವಾಗಿ ಕೋರಿಕೊಳ್ಳುತ್ತಲೇ ಇದೆ.
ಶುಮ್ಯಾಕರ್ ಅವರ ದೇಹಸ್ಥಿತಿಯ ಬಗ್ಗೆ ಕೆಲವೇ ಮಾಹಿತಿಗಳನ್ನು ಬಹಿರಂಗ ಗೊಳಿಸಲಾಗಿದೆ. ಶುಮ್ಯಾಕರ್ ಅವರ ಆರೋಗ್ಯ ಸಾರ್ವಜನಿಕ ಚರ್ಚೆಯ ವಿಷಯ ವಲ್ಲ, ಹೀಗಾಗಿ ಈ ಬಗ್ಗೆ ವೌನವನ್ನು ಕಾಯ್ದುಕೊಳ್ಳಲಾಗುವುದು ಎಂದು ಅವರ ಮ್ಯಾನೇಜರ್ ಸಬಿನೆ ಕೆಹ್ಮ್ ಹೇಳಿದ್ದಾರೆ.
ಶುಮ್ಯಾಕರ್ ತನ್ನ ಖಾಸಗಿತನದ ಬಗ್ಗೆ ಭಾರೀ ಕಾಳಜಿ ವಹಿಸುತ್ತಿದ್ದರು. ತನ್ನ ವೃತ್ತಿ ಜೀವನದ ಅತ್ಯಂತ ಉತ್ತುಂಗದ ದಿನಗಳಲ್ಲೂ ಅವರು ಈ ಕಾಳಜಿಯನ್ನು ಬಿಟ್ಟಿರಲಿಲ್ಲ. ತನ್ನ ಸಾರ್ವಜನಿಕ ವ್ಯಕ್ತಿತ್ವ ಮತ್ತು ಖಾಸಗಿ ಬದುಕಿನ ನಡುವೆ ಸ್ಪಷ್ಟ ಅಂತರವನ್ನು ಅವರು ಕಾಯ್ದುಕೊಂಡಿದ್ದರು ಎಂದು ಕೆಹ್ಮ್ ಹೇಳಿದ್ದಾರೆ.
2013,ಡಿಸೆಂಬರ್‌ನಲ್ಲಿ ಸ್ಕೀಯಿಂಗ್ ಅವಘಡದ ಬಳಿಕ ಶುಮ್ಯಾಕರ್ ಅವರು ಕೋಮಾ ಸ್ಥಿತಿಯಲ್ಲಿದ್ದರು. 2014,ಜೂನ್‌ನಲ್ಲಿ ಅವರಿಗೆ ಪ್ರಜ್ಞೆ ಮರುಕಳಿಸಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅವರನ್ನು ಜಿನೆವಾದ ಅವರ ಕುಟುಂಬದ ಮನೆಯಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಶರೀರ ಭಾಗಶಃ ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.