×
Ad

ಮನಪಾಕ್ಕೆ ಕುಡಿಯುವ ನೀರಿಗೆ ಹೊಸ ಕಿಂಡಿ ಅಣೆಕಟ್ಟಿನಿಂದ ಪರಿಹಾರ: ಬಿ.ರಮಾನಾಥ ರೈ

Update: 2016-12-20 15:44 IST

75ಕೋಟಿ ರೂ ವೆಚ್ಚದ ಕಿಂಡಿ ಅಣೆಕಟ್ಟು ಯೋಜನೆ ಪೂರ್ಣ,  ನಾಲ್ಕೂವರೆ ಮೀಟರ್ ನೀರು ಸಂಗ್ರಹ.

ಮಂಗಳೂರು,ಡಿ.20: ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆ ಹಳೆ ಡ್ಯಾಂ ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿರುವ ನಿರ್ಮಿಸಲಾಗಿರುವ 75.50 ಕೋಟಿ ರೂ.ಯೋಜನೆಯ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ರಸಕ್ತ ಸುಮಾರು ನಾಲ್ಕೂವರೆ ಮೀಟರ್ ನೀರು ಶೇಖರಣೆಯಾಗಿರುವ ಸಂದರ್ಭದಲ್ಲಿ ರಾಜ್ಯ ಪರಿಸರ, ಜೀವಿಶಾಸ್ತ್ರ ಮತ್ತು ಅರಣ್ಯ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇಂದು ಬಾಗಿನ ಅರ್ಪಿಸಿದರು.

ಹಿಂದಿನ ಅಣೆಕಟ್ಟಿನಲ್ಲಿ ನೀರಿನ ಸೋರಿಕೆ ಹೆಚ್ಚುತ್ತಾ ಸಾಗಿದ ಪರಿಣಾಮವಾಗಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಬೇಕಾಯಿತು. ಈ ಯೋಜನೆ 2007ರಲ್ಲಿ ಆರಂಭಗೊಂಡು ನಿಧಾನ ಗತಿಯಲ್ಲಿ ಸಾಗುತ್ತಿತ್ತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ರಾಜ್ಯದ ನಗರಾಭಿವೃದ್ಧಿ ಸಚಿವರಾದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆಗೆ ಹೆಚ್ಚುವರಿ ಹಣ ಮಂಜೂರು ಮಾಡಲು ಕಾರಣರಾಗಿದ್ದಾರೆ. ಈ ಯೋಜನೆಯ ಸಂದರ್ಭದಲ್ಲಿ ನೀರು ಸರಬರಾಜಾಗುವ ಪ್ರದೇಶದ ನೇತ್ರಾವತಿ ನದಿ ತೀರದ ಜನರಿಗೆ ಕುಡಿಯುವ ನೀರು ಒದಗಿಸಲು ಹೆಚ್ಚಿನ ಗಮನಹರಿಸಬೇಕು ಎನ್ನುವ ನಿಟ್ಟಿನಲ್ಲಿ ಎಡಿಬಿ ಯೋಜನೆಯಲ್ಲಿ ಸುಮಾರು 10 ಕೋಟಿ ರೂ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುವುದು. ನೀರು ಪ್ರಕೃತ್ತಿ ದತ್ತವಾಗಿ ದೇವರು ಸಕಲ ಜೀವ ರಾಶಿಗಳಿಗೆ ನೀಡಿದ ಸಂಪತ್ತು ಅದನ್ನು ಹಂಚಿ ಮಿತವಾಗಿ ಬಳಸಬೇಕಾಗಿದೆ. ಪರಿಸರದ ರಕ್ಷಣೆ, ಜೀವಿಗಳ ರಕ್ಷಣೆ ನೀರಿನ ಸಂರಕ್ಷಣೆ ಜೊತೆಯಾಗಿ ಸಾಗಬೇಕು ಎಂದು ರಮಾನಾಥ ರೈ ತಿಳಿಸಿದರು. ಕರಾವಳಿಯಲ್ಲಿ ಅಂತರ್ಜಲಮಟ್ಟವನ್ನು ಏರಿಸಲು ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಪಶ್ಚಿಮವಾಹಿನಿ ಯೋಜನೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರದ ಯೋಜನೆಯಾಗಬಹುದು. ಪ್ರಸಕ್ತ ಈ ಯೋಜನೆಯಿಂದ ಸಂತ್ರಸ್ತರಾಗುವ ಕೃಷಿಕರಿಗೆ, ಭೂಮಿಯ ಮಾಲಕರಿಗೆ ಪರಿಹಾರವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.

1970ರಲ್ಲಿ ಪ್ರಥಮ ಯೋಜನೆ

ತುಂಬೆಯ ಬಳಿ ನೇತ್ರಾವತಿ ನದಿಗೆ 1970ರಲ್ಲಿ ಹಳೆ ಕಿಂಡಿ ಅಣೆಕಟ್ಟು ನಿರ್ಮಿಸಿ ಕರ್ನಾಟಕ ಸರಕಾರದ ಅಧೀನದಲ್ಲಿದ್ದ ಎಂಸಿಎಫ್ ಕಾರ್ಖಾನೆಗೆ ನೀರು ಸರಬರಾಜು ಮಾಡಲು ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.ಬಳಿಕ ಮಂಗಳೂರು ಮಹಾನಗರವಾಗಿ ವಿಸ್ತಾರವಾದ ಬಳಿಕ ಮಂಗಳೂರಿಗೆ ಕುಡಿಯುವ ನೀರಿನ ಬಳಕೆಗಾಗಿ ಈ ಯೋಜನೆಯಿಂದಲೇ ನೀರು ಬಳಸಲಾಗುತಿತ್ತು.2007ರಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲು 40 ಕೋಟಿ ರೂ ಯೋಜನೆ ವರ್ಷಗಳು ಕಳೆದ ನಂತರ ಯೋಜನೆಯ ಮೊತ್ತ ಹೆಚ್ಚುತ್ತಾ 2014ರಲ್ಲಿ 75.50 ಕೋಟಿ ರೂಗಳಿಗೆ ಏರಿಕೆಯಾಗಿದೆ.ಈ ಯೋಜನೆ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ.ತುಂಬೆಯಿಂದ ಉಳ್ಳಾಲ, ಕೊಣಾಜೆ,ಮುಲ್ಕಿಯವರೆಗೂ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಮಹತ್ವದ ಯೋಜನೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ ನೀರು ಸರಬರಾಜಾಗುತ್ತಿರುವ ಸಂದರ್ಭದಲ್ಲಿ ಆಗುತ್ತಿರುವ ಶೇ.10ರಷ್ಟು ಸೋರಿಕೆಯನ್ನು ತಡೆದರೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
          
ಮಂಗಳೂರು ಮೇಯರ್ ಹರಿನಾಥ್ ಮಾತನಾಡುತ್ತಾ ತುಂಬೆ ಕಿಂಡಿ ಅಣೆಕಟ್ಟಿನ ನೀರಿನ ಸಂಗ್ರಹದಲ್ಲಿ ಮುಳುಗಡೆಯಾಗುವ ಸುಮಾರು 12 ಎಕ್ರೆ ಖಾಸಗಿ ಭೂಮಿಯ 18 ರೈತರ ಕುಟುಂಬಗಳಿಗೆ ವಾರ್ಷಿಕ ಬಾಡಿಗೆ ಒಟ್ಟು 16ಲಕ್ಷ 20 ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಾಸಕರಾದ ಐವನ್ ಡಿ ಸೋಜ, ಮೊಹಿಯುದ್ದೀನ್ ಬಾವ,ಬಂಟ್ವಾಳ ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವಾ,ಉಪಾಧ್ಯಕ್ಷ ಮುಹಮ್ಮದ್,ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,ಮನಪಾ ಉಪಾಧ್ಯಕ್ಷೆ ಸುಮಿತ್ರಾ ಕರಿಯ,ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ, ಮನಪಾ ಕಮೀಷನರ್ ಮುಹಮ್ಮದ್ ನಝೀರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ,ತುಂಬೆ ಪಂಚಾಯತ್ ಅಧ್ಯಕ್ಷೆ ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News