×
Ad

ಬಹುಸಂಸ್ಕೃತಿಯನ್ನು ಒಪ್ಪದವರಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಷಡ್ಯಂತ್ರ: ಸಬೀಹಾ ಫಾತಿಮಾ

Update: 2016-12-20 18:11 IST

ಮಂಗಳೂರು, ಡಿ.20 : ನಮ್ಮ ದೇಶವು ವಿವಿಧ ಧರ್ಮ, ಭಾಷೆ, ಆಚಾರಗಳನ್ನು ಆಚರಿಸುತ್ತಾ ನಾವು ಒಂದೇ ಸಂವಿಧಾನದಡಿಯಲ್ಲಿ ಬದುಕುತ್ತಿದ್ದೇವೆ. ಆದರೆ ದೇಶದ ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಸ್ವಯಂಘೋಷಿತ ದೇಶಪ್ರೇಮಿಗಳಿಂದ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಷಡ್ಯಂತ್ರ ಮಾಡಲಾಗುತ್ತಿದೆ. ಆದ್ದರಿಂದ ಪ್ರಜ್ಞಾವಂತ ದೇಶದ ನಾಗರಿಕರು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾದ ಅಗತ್ಯತೆ ಇದೆ ಎಂದು ಅನುಪಮ ಮಹಿಳಾ ಮಾಸಿಕ ಉಪಸಂಪಾದಕಿ, ಜಮಾಅತೆ ಇಸ್ಲಾಮೀ ಹಿಂದ್‍ನ ಸಬೀಹಾ ಫಾತಿಮಾ ಎಚ್ಚರಿಸಿದರು.  

ಅವರು ಕೇಂದ್ರ ಸರಕಾರವು ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಇಂದು  ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಮಹಿಳೆಯರಿಗಾಗಿ ಆಯೋಜಿಸಿದ್ದ ಶರೀಅತ್ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಬ್ರಿಟೀಷರು ಭಾರತಕ್ಕೆ ಕಾಲಿಡುವುದಕ್ಕಿಂತ ಮುಂಚೆ ನಮ್ಮ ದೇಶವನ್ನಾಳಿದ್ದ ಹಲವಾರು ಮುಸ್ಲಿಂ ರಾಜರುಗಳ ಕೊಡುಗೆಯನ್ನು ಮರೆಮಾಚಲಾಗುತ್ತಿದೆ. ಈ ಮೂಲಕ ದೇಶದ ಇತಿಹಾಸವನ್ನು ತಿರುಚಿಸಲಾಗುತ್ತಿದೆ. ಬ್ರಿಟೀಷರು ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಈ ದೇಶವನ್ನು ಆಳಿದ್ದರು. ಅದನ್ನೇ ಇಂದು ನಮ್ಮ ದೇಶದಲ್ಲಿ ಮುಂದುವರಿಸಲು ಹವಣಿಸಲಾಗುತ್ತಿದೆ ಎಂದರು.

ಪರ್ಸನಲ್ ಲಾ ಎಂಬ ವಿಚಾರ ಕೇವಲ ಮುಸ್ಲಿಮರಿಗೆ ಮಾತ್ರ ಇಲ್ಲ. ಅದು ಹಿಂದೂ ಬಾಂಧವರಿಗೂ, ಕ್ರೈಸ್ತರಿಗೂ ಸೇರಿದಂತೆ ಇದೆ ಎಂಬುವುದು ಎಲ್ಲರೂ ತಿಳಿಯಬೇಕಾಗಿದೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಎಲ್ಲರೂ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ ಎಂದ ಅವರು, ಇಸ್ಲಾಮೀ ಶರೀಅತ್‍ನ ನಿಯಮಗಳು ಸರಿಯಾದ ರೀತಿಯಲ್ಲಿ ಅರಿತುಕೊಂಡು ಪ್ರತಿಯೊಂದು ಮುಸ್ಲಿಂ ಕುಟುಂಬ ಪಾಲಿಸಿದಲ್ಲಿ ಬದಲಾವಣೆ ಖಂಡಿತ ಸಾಧ್ಯವಿದೆ ಎಂದು ಸಬೀಹಾ ಫಾತಿಮಾ ಅಭಿಪ್ರಾಯಪಟ್ಟರು.

ತಲಾಖ್ ನಿಂದ ನಮ್ಮ ದೇಶದ ಮುಸ್ಲಿಂ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎಂದು ಹೇಳುತ್ತಾ ಮುಸ್ಲಿಂ ಮಹಿಳೆಯರ ಬಗ್ಗೆ ವಿಪರೀತ ಕಾಳಜಿ ತೋರಿಸುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದಲ್ಲಿ ದಿನನಿತ್ಯ ಕೇಳಿಬರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ,  ಮದ್ಯಪಾನದಿಂದಾಗುತ್ತಿರುವ ಹಲವು ವಿದ್ಯಮಾನಗಳ ಸಹಿತ ವಿವಿಧ ಸಮಸ್ಯೆಗಳ ಅರಿವಿಲ್ಲದಿರುವುದು ವಿಪರ್ಯಾಸ ಎಂದು ಹೇಳಿದರು.
 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Similar News