×
Ad

ದಿಡ್ಡಳ್ಳಿ ಆದಿವಾಸಿಗಳಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ

Update: 2016-12-20 18:18 IST

ಮಂಗಳೂರು, ಡಿ.20: ಕೊಡಗು ಜಿಲ್ಲೆಯ ದಿಡ್ಡಳ್ಳಿಯ ಆದಿವಾಸಿಗಳಿಗಾದ ಅನ್ಯಾಯವನ್ನು ಖಂಡಿಸಿ ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿಯು ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ದಲಿತ ಸಂಘಟನೆಯ ಮುಖಂಡ ರಘುವೀರ್ ಸೂಟರ್‌ಪೇಟೆ ಮಾತನಾಡಿ, ಆದಿವಾಸಿಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಒಕ್ಕಲೆಬ್ಬಿಸಿರುವ ಕ್ರಮ ಅಕ್ಷಮ್ಯ. ಪೊಲೀಸ್ ಅಸ್ತ್ರ ಬಳಸಿ ಹಿಂಸೆ ನೀಡಿರುವುದನ್ನು ಸಹಿಸಲು ಅಸಾಧ್ಯ. ಜನಸೇವಕರಾಗಬೇಕಾಗಿದ್ದ ಅಧಿಕಾರಿಗಳು ಜನಪೀಡಕರಾಗಿರುವುದು ನಾಚಿಕೆಗೇಡು ಎಂದರು.

ದ.ಕ.ಜಿಲ್ಲಾ ಕೋಮುಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಮಾತನಾಡಿ, ಅಧಿಕಾರಿಗಳು ಕೇವಲ ಪದವೀಧರರಾದರೆ ಸಾಲದು. ಅವರಲ್ಲಿ ಮಾನವೀಯತೆ ಮುಖ್ಯ. ರಾಜ್ಯ ಅರಣ್ಯ ಸಚಿವರ ಗಮನಕ್ಕೂ ತಾರದೆ ಆದಿವಾಸಿಗಳನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಿರುವುದನ್ನು ಗಮನಿಸುವಾಗ ಈ ದೇಶದಲ್ಲಿ ಸಂವಿಧಾನಾತ್ಮಕವಾದ ಆಡಳಿತ ಇದೆಯೇ? ಎಂಬ ಸಂಶಯ ಬರುತ್ತದೆ ಎಂದರು.

ಪ್ರತಿಭಟನೆಯಲ್ಲಿ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ವಿವಿಧ ಸಂಘಟನೆಯ ಮುಖಂಡರಾದ ಅಶೋಕ್ ಕೊಂಚಾಡಿ, ಸಂಜೀಪ, ಶಬ್ಬೀರ್, ಸರ್ಫ್ರಾಝ್, ಮುಹ್ಸಿನ್, ಎಸ್ಪಿ ಆನಂದ ಮತ್ತಿತರರು ಪಾಲ್ಗೊಂಡಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News