×
Ad

ಏಕ ನಾಗರಿಕ ಸಂಹಿತೆಯು ಬಿಜೆಪಿಯ ಚುನಾವಣಾ ಪ್ರಣಾಳಿಕೆಯೇ ಹೊರತು ಮಹಿಳೆಯರ ಮೇಲಿನ ಕಾಳಜಿಯಿಂದಲ್ಲ

Update: 2016-12-20 19:21 IST

ಮಂಗಳೂರು, ಡಿ.20 :   ಏಕ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಬಿಜೆಪಿಯ ಚುಣಾವಣಾ ಸಂದರ್ಭದ ಚುಣಾವಣಾ ಪ್ರಣಾಳಿಕೆಯಾಗಿದೆ. ಇದು ಲಿಂಗ ಅಸಮಾನತೆಯಿಂದಾಗಲಿ,  ಮುಸ್ಲಿಂ ಮಹಿಳೆಯ ಮೇಲಿನ ಅನುಕಂಪವಾಗಲಿ ಅಲ್ಲ. ಎಲ್ಲವನ್ನು ಮೊದಲೇ ನಿರ್ಧರಿಸಿದಂತೆ ಸಿದ್ಧಪಡಿಸಿದ ಚಿತ್ರಕತೆಯಾಗಿದೆ ಎಂದು ನ್ಯಾಷನಲ್  ವುಮೆನ್ಸ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶಾಹಿದಾ ಅಸ್ಲಂ ಹೇಳಿದರು.

ಅವರು ಮಂಗಳೂರಿನಲ್ಲಿ ನಡೆದ ಮುಸ್ಲಿಂ ಶರೀಯತ್ ಸಂರಕ್ಷಣಾ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಈಗಲೂ ದೇಶದ ಅರ್ಧದಷ್ಟು ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ದಲಿತರು, ಹಿಂದುಳಿದವರು ಮುಖ್ಯವಾಹಿನಿಗೆ ಬರದಂತೆ ತಡೆಯಲಾಗುತ್ತಿವೆ. ಶರಾಬಿನಿಂದ ಮಹಿಳೆಯರ ಮೇಲಾಗುವ ನಾಶ, ನಷ್ಟಗಳು  ಹೇಳಲಾಗದಷ್ಟಿವೆ. ಇವೆಲ್ಲವೂ ರಾಜ್ಯ ನಿರ್ದೇಶನ ತತ್ವಗಳಡಿಯಲ್ಲಿ ಬರುತ್ತದೆ. ಆದರೆ ಸರಕಾರ ಇವುಗಳನ್ನು ಜಾರಿಗೊಳಿಸಲು ಕಾಳಜಿಯನ್ನು ವಹಿಸುತ್ತಿಲ್ಲ ಎಂದು ಮಹಿಳೆಯರ ನಿಜವಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಏಕ ನಾಗರಿಕ ಸಂಹಿತೆ ನಿರ್ದಿಷ್ಟವಾದ ರಾಜಕೀಯ ಅಜೆಂಡಾವಾಗಿದೆ. ಇದನ್ನು ಸಂವಿಧಾನಾತ್ಮಕವಾಗಿ ಮತ್ತು ಪ್ರಾಯೋಗಿಕವಾಗಿ ಜಾರಿಗೆ ತರಲಲು ಅಸಾಧ್ಯ ಎಂಬುದು ಅವರಿಗೆ ತಿಳಿದಿದೆ. ಆದರೂ ರಾಷ್ಟ್ರೀಯತೆಗೆ ಮುಖ್ಯ ತಡೆ ಮುಸ್ಲಿಮರು ಎಂಬ ಅಪಪ್ರಚಾರವನ್ನು ನಡೆಸಲಾಗುತ್ತಿದೆ. ಈ ಮೂಲಕ ಬಹುಸಂಖ್ಯಾತ ಹಿಂದೂಗಳನ್ನು ಏಕೀಕೃತಗೊಳಿಸುವುದು ಇವರ ಷಡ್ಯಂತ್ರವಾಗಿದೆ ಎಂದು ಹೇಳಿದರು.

ಹಿಂದೂಗಳ ಮಧ್ಯೆ ಇರುವ ವೈವಿಧ್ಯತೆಯು ಹೇಗೆ ಭಾರತದ ರಾಷ್ಟ್ರೀಯತೆಗೆ ತಡೆಯಾಗಿಲ್ಲವೋ,  ಹಾಗೆಯೇ ಮುಸ್ಲಿಮರ ವೈಯಕ್ತಿಕ ಕಾನೂನು ರಾಷ್ಟ್ರೀಯತೆಗೆ ಇಲ್ಲಿಯವರೆಗೆ ತಡೆಯಾಗಿಲ್ಲ. ಇನ್ನು ಮುಂದೆಯೂ ತಡೆಯಾಗಲಾರದು. ಯಾಕೆಂದರೆ ಮುಸ್ಲಿಂ ವೈಯಕ್ತಿಕ ಕಾನೂನು ಎನ್ನುವುದು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಕುಟುಂಬ ವಿಷಯಗಳಿಗೆ ಸಂಬಂಧಿಸಿದ ಕಾನೂನು.

ಮೋದಿಯವರ ಆಡಳಿತದಲ್ಲಿ, ದೇಶವನ್ನು ನುಂಗುತ್ತಿರುವ ದೈತ್ಯ ಬಂಡವಾಳಿಗಳ ವಿಜೃಂಭಣೆಯನ್ನು, ಸಾಮಾನ್ಯ ಜನರಲ್ಲಿ ಉಂಟಾಗುತ್ತಿರುವ ಬೆಲೆ ಏರಿಕೆಯ ಪರಿಣಾಮಗಳು,  ಕೊಲೆ, ಅಸಹಿಷ್ಣುತೆ, ದಲಿತ ವಿರೋಧಿ ದಾಳಿಗಳು, ಮುಂಚೂಣಿಗೆ ಬರುತ್ತಿರುವ ದಲಿತ ಮುನ್ನಡೆಗಳು ಮೊದಲಾದವುಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ ಬಿಡಲು ಈ ಅಪಪ್ರಚಾರ ನಡೆಸಲಾಗುತ್ತಿದೆ. ದೇಶದ ಸಂವಿಧಾನದಿಂದ ಪ್ರಜಾಪ್ರಭುತ್ವ, ಸಮಾಜವಾದವನ್ನು ತೆಗೆದು ಹಾಕುವ ಪ್ರಯತ್ನಗಳು ಕೂಡ ಈಗಾಗಲೆ ಬಹಿರಂಗವಾಗಿವೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಮೂರು ತಲಾಕಿಗಿಂತಲೂ ಒಪ್ಪತ್ತಿನ ಊಟಕ್ಕಾಗಿ ಪರದಾಡುತ್ತಿರುವಂತಹ ತೀವ್ರವಾದ ದಾರಿದ್ರ್ಯವಿದೆ.  ಕೊಳಚೆ ಪ್ರದೇಶಗಳಲ್ಲಿ ವಾಸಿಸುವಂತಹ, ತಮ್ಮ ಶಿಕ್ಷಣಕ್ಕಾಗಿ,  ಜೀವನೋಪಾಯಕ್ಕಾಗಿ ವೇಶ್ಯಾವಾಟಿಕೆಗಳಿಗೆ ಬಲಿಯಾದಂತಹ ,  ಅತ್ಯಾಚಾರ, ಒಂಟಿ ಬದುಕು, ಭಿಕ್ಷಾಟನೆಗೆ ಒಳಗಾಗಿರುವಂತಹ ಲಕ್ಷಾಂತರ ಮಹಿಳೆಯರಿದ್ದಾರೆ. ಅವರಿಗೆ ಘನತೆಯ ಬದುಕು ಒದಗಿಸುವಂತಹ ಕೆಲಸ ಸರಕಾರ ಮಾಡಬೇಕು. ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉದ್ಧಾರಕ್ಕಾಗಿ ಸರಕಾರ ಮುಂದೆ ಬರಬೇಕು ಎಂದು ಆಗ್ರಹಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News