ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ದೊಡ್ಡ ಸಮಸ್ಯೆ: ಡಾ.ಹೆಗ್ಗಡೆ
ಆತ್ರಾಡಿ, ಡಿ.20: ಜನದಟ್ಟಣೆಯಿಂದಾಗಿ ಧಾರ್ಮಿಕ ಕೇಂದ್ರಗಳಲ್ಲಿ, ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆಯನ್ನು, ನೈರ್ಮಲ್ಯವನ್ನು ಕಾಪಾಡುವುದು ಅತೀ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಆತ್ರಾಡಿ ಗ್ರಾಪಂ ವ್ಯಾಪ್ತಿಯ ಪರೀಕ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂದು ಪ್ರಶಸ್ತಿ ಪಡೆದಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಜನಜಾಗೃತಿಯನ್ನು ಮೂಡಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಧರ್ಮ ಮತ್ತು ನೈತಿಕತೆಗೆ ಸಂಬಂಧವಿದೆ. ನೈತಿಕತೆ ಎನ್ನುವುದು ನಮ್ಮ ಆಚರಣೆಗಳಲ್ಲಿ ಮೂಡಿಬರಬೇಕಾಗಿದೆ. ದೂರದೂರುಗಳಿಂದ ಬರುವ ಭಕ್ತರಿಗೆ ಕೇವಲ ದೇವರ ದರ್ಶನವೊಂದೇ ಗುರಿಯಾಗಬಾರದು. ದರ್ಶನದ ಬಳಿಕ ದೇವಾಲಯದ ಪರಿಸರ ಹಾಗೂ ಆ ಊರು ಸ್ವಚ್ಛವಾಗಿರುವಂತೆ ಎಚ್ಚರಿಕೆ ವಹಿಸಬೇಕು ಎಂದವರು ಹೇಳಿದರು.
ದೇವರಿಗೆ ಸಲ್ಲಿಸುವ ಪೂಜೆ, ಹರಿಕೆ, ಕಾಣಿಕೆಯಂತೆ ಪರಿಸರವನ್ನು ನಿರ್ಮಲವಾಗಿರಿಸುವುದು ಸಹ ನಿಮ್ಮ ಇನ್ನೊಂದು ಪ್ರಮುಖ ಕರ್ತವ್ಯ ಎಂಬುದನ್ನು ಮರೆಯಬಾರದು. ಸ್ವಚ್ಛತೆಯಿಂದ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ಪ್ರತಿ ಊರುಗಳಲ್ಲಿರುವ ಶ್ರದ್ಧಾಕೇಂದ್ರಗಳ ಶುದ್ಧತೆ, ನೈರ್ಮಲ್ಯಕ್ಕೆ ಭಕ್ತರು ಬದ್ಧರಾಗಿರ ಬೇಕು. ಇದನ್ನೊಂದು ದೀಕ್ಷೆಯಾಗಿಸಿಕೊಳ್ಳಬೇಕು ಎಂದರು.
ಅದೇ ರೀತಿ ದೇವಾಲಯಗಳೂ ಸ್ವಚ್ಛತೆಗೆ ಬೇಕಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸಬೇಕು. ಪ್ರತಿ ದೇವಾಲಯಗಳ ಸಮೀಪದಲ್ಲಿ ಶೌಚಾಲಯ ಗಳನ್ನು ನಿರ್ಮಿಸಬೇಕು. ಜನ ಕಂಡಕಂಡಲ್ಲಿ ಉಗುಳದಂತೆ ನೋಡಿಕೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಎಲ್ಲಾ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಗ್ರಾಮಗಳಲ್ಲಿರುವ ಶ್ರದ್ಧಾಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ, ಪರಿಸರವನ್ನು ಜ.13ರೊಳಗೆ ಶುಚಿಗೊಳಿಸುವ ಗುರಿಯೊಂದಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪರಿಕ ಶ್ರೀಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಭೋಜರಾಜ ಎಲ್.ಹೆಗ್ಡೆ, ಆಡಳಿತ ಮಂಡಳಿ ಸದಸ್ಯ ಮಹಾಬಲ ಶೆಟ್ಟಿ, ಜನಜಾಗೃತಿ ವೇದಿಕೆ ಮುಖ್ಯಸ್ಥ ಸತ್ಯಾನಂದ ನಾಯಕ್, ಆತ್ರಾಡಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಚೆನ್ನಿಬೆಟ್ಟು ಕಲ್ಲುಕುಟ್ಟಿಗ ದೈವಸ್ಥಾನದ ಮುಖ್ಯಸ್ಥ ಹಾಗೂ ಸ್ವಚ್ಛತಾ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, 20 ವಿವಿಧ ಸಂಘಸಂಸ್ಥೆಗಳು, ಸಂಘಟನೆಗಳು ಸೇರಿ ಸ್ವಚ್ಚತಾ ಸಮಿತಿಯನ್ನು ರಚಿಸಿದ್ದು, ಪ್ರತಿ ರವಿವಾರ ಪರಿಸರದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್ ವಂದಿಸಿದರೆ, ಉಮಾ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪುರುಷೋತ್ತಮ ಪಿ.ಕೆ. ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.