ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮಾರಾಟ ಉದ್ಘಾಟನೆ
ಉಡುಪಿ, ಡಿ.20: ಕರ್ನಾಟಕದ ಪಾರಂಪರಿಕ ರೇಷ್ಮೆ ಉತ್ಪನ್ನವಾದ ಜಗತ್ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉಡುಪಿಯ ಡಯಾನ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು.
ಉಡುಪಿ ನಗರ ಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾವ ಬನ್ನಂಜೆಮೇಳವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಅತ್ಯಂತ ಹಳೆಯ ಸಂಸ್ಥೆಯಾದರೂ ಸಹ ಉತ್ತಮ ಗುಣಮಟ್ಟದ ರೇಷ್ಮೆಸೀರೆಗಳಿಗೆ ಪ್ರಖ್ಯಾತವಾಗಿದೆ. ಕ್ರಿಸ್ಮಸ್, ಹೊಸವರ್ಷ ಮತ್ತು ಸಂಕ್ರಾಂತಿಹಬ್ಬಗಳ ಸಮಯದಲ್ಲಿ ಉಡುಪಿಯಲ್ಲಿ ಆಯೋಜಿಸಿರುವ ಈ ಮಾರಾಟ ಗ್ರಾಹಕರಿಗೆ ಉತ್ತಮಸೇವೆಯನ್ನು ನೀಡಲಿಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಸಿಲ್ಕ್‌ನ ಮಾರಾಟ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್, ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುವ ಮೈಸೂರು ಸಿಲ್ಕ್ ಸೀರೆಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ದೀರ್ಘಕಾಲದ ಬಾಳಿಕೆಗೆ ಹೆಸರುವಾಸಿಯಾಗಿವೆ, ಈ ಸೀರೆಯ ಜರಿಯು ಪರಿಶುದ್ದ ಚಿನ್ನದಿಂದ ಕೂಡಿದ್ದು ಶೇ.0.65 ಚಿನ್ನ ಮತ್ತು ಶೇ.65ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ಸೀರೆಯ ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನಿಕತೆಯಿಂದ ಕೂಡಿದೆ ಎಂದರು.
ಅಲ್ಲದೇ ಸಂಸ್ಥೆಯು ಭೌಗೋಳಿಕ ಗುರುತಿನ ನೊಂದಣಿ ಪಡೆದಿದ್ದು, ಆನ್‌ಲೈನ್‌ನಲ್ಲಿ ಸಹ ವ್ಯಾಪಾರಕ್ಕೆ ಅವಕಾಶವಿದೆ. ವಿದೇಶಗಳಿಂದ ಸಹ ಭಾರೀ ಬೇಡಿಕೆ ಬರುತ್ತಿದೆ. ಮೈಸೂರು ಸಿಲ್ಕ್ ಸೀರೆಗಳನ್ನು ಸಂಸ್ಥೆಯ ಶೋ ರೂಂಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು ಇತರೆಡೆಗಳಲ್ಲಿ ಲಭ್ಯವಿರುವುದಿಲ್ಲ ಎಂದರು.
ಉಡುಪಿಯ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇಂದಿನಿಂದ ಡಿ.24ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ಗಂಟೆಯವರೆಗೆ ತೆರೆದಿರುತ್ತದೆ. ಇಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ಶೇ.20ರಷ್ಟು ವಿಶೇಷ ರಿಯಾಯತಿ ಹಾಗೂ ಸರಕಾರಿ ನೌಕರರಿಗೆ ಬಡ್ಡಿರಹಿತ ಸುಲಭದ 10 ಕಂತುಗಳಲ್ಲಿ ಉತ್ಪನ್ನಗಳ ಖರೀದಿಗೆ ಅವಕಾಶವಿದೆ. 13,000ರೂ.ನಿಂದ 2,60,000ರೂ.ವರೆಗಿನ ವೌಲ್ಯದ ವಿಶಿಷ್ಠ ವಿನ್ಯಾಸದ ಸೀರೆಗಳು ಲ್ಯವಿದೆ ಎಂದು ಭಾನುಪ್ರಕಾಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಹಕರು ಸೂಚಿಸಿದ ವಿಶೇಷ ವಿನ್ಯಾಸದಂತೆ ತಯಾರಿಸಿದ ಸೀರೆಯನ್ನು ಹಾಗೂ ಸ್ಕ್ರಾಚ್‌ಗಾರ್ಡ್ ತಂತ್ರಜ್ಞಾನದೊಂದಿಗೆ ತಯಾರಿಸಿದ ಸೀರೆಯನ್ನು ಮೀನಾಕ್ಷಿ ಮಾಧವ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರದರ್ಶನ ಮಾರಾಟದ ಮುಖ್ಯಸ್ಥ ಕುಮಾರಸ್ವಾಮಿ ಹಾಗೂ ಡಯಾನ ಹೋಟೆಲ್‌ನ ವಿಠಲ ಪೈ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.