ಸ್ಕೂಟಿಯೊಳಗೆ ಸೇರಿ ಸಿಕ್ಕಿ ಹಾಕಿಕೊಂಡ ಬೆಕ್ಕು : ಬಂಪರ್ ಬಿಚ್ಚಿ ಹೊರ ತೆಗೆಸಿದ ಮಾಲಕ
ಪುತ್ತೂರು, ಡಿ.20 : ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿಯೊಂದರ ಅಡಿಭಾಗದಿಂದ ಒಳನುಗ್ಗಿದ ಬೆಕ್ಕೊಂದು ಹಿಂದಿರುಲಾರದೆ ಒಳಗೇ ಬಾಕಿಯಾಗಿ ಬಳಿಕ ಸ್ಕೂಟರ್ ಮಾಲಕ ಬೆಕ್ಕಿನ ಸಹಿತ ಸ್ಕೂಟಿಯನ್ನು ಗ್ಯಾರೇಜ್‌ಗೆ ಕೊಂಡೊಯ್ದು ಬೆಕ್ಕನ್ನು ಹೊರತೆಗೆದ ಸ್ವಾರಸ್ಯಕರ ಘಟನೆ ಮಂಗಳವಾರ ಪುತ್ತೂರು ನಗರದಲ್ಲಿ ನಡೆಯಿತು.
ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಅನಿಲ್ ಕಾಮತ್ ಎಂಬವರು ತನ್ನ ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಲಸದ ನಿಮಿತ್ತ ಅಂಗಡಿಯೊಂದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಗಾಡಿಯ ಅಡಿ ಭಾಗದಿಂದ ಒಳಗೆ ನುಗ್ಗಿದ್ದ ಬೆಕ್ಕು ಅದೇ ಏರಿಕೊಂಡು ಸ್ಕೂಟಿಯ ಬಂಪರ್‌ನ ಒಳಗೆ ಪ್ರವೇಶಿಸಿತ್ತು.
ಕೆಲ ಹೊತ್ತಿನ ಬಳಿಕ ಹೋದ ದಾರಿಯಿಂದ ಬೆಕ್ಕು ವಾಪಸ್ ಬರಲು ಯತ್ನಿಸಿದರೂ ಬರಲಾಗದ ಕಾರಣ ಚಡಪಡಿಸುತ್ತಾ ಕೂಗಲಾರಂಭಿಸಿತು. ಮಾಲೀಕರು ಬಂದು ನೋಡಿದಾಗ ಬೆಕ್ಕಿನ ಅವಾಂತರ ಬೆಳಕಿಗೆ ಬಂತು. ಬೆಕ್ಕನ್ನು ಹೊರ ಬರುವಂತೆ ಮಾಡಲು ಅನಿಲ್ ಕಾಮತ್ ಸೇರಿದಂತೆ ಅಲ್ಲಿದ್ದ ಸ್ಥಳೀಯರು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಪಕ್ಕದಲ್ಲಿನ ಗ್ಯಾರೇಜ್ ಒಂದಕ್ಕೆ ಸ್ಕೂಟಿಯನ್ನು ಕೊಂಡೊಯ್ದು ಬಂಪರ್ ಬಿಚ್ಚಿ ಬೆಕ್ಕನ್ನು ಹೊರತೆಗೆಯಲಾಯಿತು. ಬೆಕ್ಕಿನ ಅವಾಂತರ ಕೆಲ ಹೊತ್ತು ಜನರಿಗೆ ಕುತೂಹಲ ಮತ್ತು ಪುಕ್ಕಟೆ ಮನರಂಜನೆಯಾಗಿತ್ತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.