×
Ad

ಗ್ರಾಪಂ, ಸರಕಾರಿ ಕಚೇರಿಗಳು ಸಂಪೂರ್ಣ ಡಿಜಿಟಲೀಕರಣ: ಸಂಸದೆ ಕರಂದ್ಲಾಜೆ

Update: 2016-12-20 21:03 IST

ಉಡುಪಿ, ಡಿ.20: ಉಡುಪಿ ಜಿಲ್ಲೆಯ ಎಲ್ಲ ಗ್ರಾಪಂ ಹಾಗೂ ಸರಕಾರಿ ಕಚೇರಿಗಳನ್ನು ಮಾ.31ರೊಳಗೆ ಸಂಪೂರ್ಣ ಡಿಜಿಟಲೈಸ್ ಮಾಡಿ ಮುಂದಿನ ಆರ್ಥಿಕ ವರ್ಷದಿಂದ ನಗದು ರಹಿತ ವ್ಯವಹಾರ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ 2016-17 ನೇ ಸಾಲಿನ ನವೆಂಬರ್ ಅಂತ್ಯದವರೆಗಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಗ್ರಾಪಂ ಅಧ್ಯಕ್ಷರು, ಪಿಡಿಓ, ಸದಸ್ಯರುಗಳಿಗೆ ಡಿ.31ರೊಳಗೆ ಸಭೆ ಕರೆದು ಮಾಹಿತಿ ಹಾಗೂ ತರಬೇತಿ ನೀಡಬೇಕು. ಮುಂದೆ ಹಂತ ಹಂತವಾಗಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಸೂಚನೆ ನೀಡಿದರು.

ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಫ್ರಾನ್ಸಿಸ್ ಬರ್ಬೋಜ ಮಾತನಾಡಿ, ಪೋಸ್ ಮೆಷಿನ್(ಪಾಯಿಂಟ್ ಆಪ್ ಸೇಲ್) ಗಳನ್ನು ಗ್ರಾಪಂಗಳಲ್ಲಿ ಅಳವಡಿಸುವ ಮೂಲಕ ಹಾಗೂ ಬೇಸಿಕ್ ಸೆಟ್‌ಗಳನ್ನು ಉಪಯೋಗಿಸಿ ಬ್ಯಾಂಕಿಂಗ್ ವ್ಯವಹಾರ ಮಾಡುವ ಬಗ್ಗೆ ಪಂಚಾಯಿತಿಗಳಲ್ಲಿ ತರಬೇತಿ ನೀಡಲಾಗುವುದು. ಈಗಾಗಲೇ 158 ಗ್ರಾಪಂಗಳನ್ನು ನಗದುರಹಿತ ಮಾಡುವ ನಿಟ್ಟಿನಲ್ಲಿ ನೀರಿನ ಬಿಲ್, ತೆರಿಗೆಯನ್ನು ಪೋಸ್ ಮೆಷಿನ್ ಮೂಲಕವೇ ಪಾವತಿಸುವ ಕುರಿತು ತರಬೇತಿ ನೀಡಲಾಗುವುದು ಎಂದರು.

ಸ್ಮಾರ್ಟ್‌ಫೋನ್ ಅಲ್ಲದ ಹಾಗೂ ಇಂಟರ್‌ನೆಟ್ ಇಲ್ಲದ ಮೊಬೈಲ್‌ಗಳ ಮೂಲಕ ಮೊಬೈಲ್ ಬ್ಯಾಂಕಿಂಗ್ ನಡೆಸಬಹುದಾಗಿದ್ದು, ಹಳ್ಳಾಡಿ ಗ್ರಾಮ ವನ್ನು ಪ್ರಥಮ ಸಂಪೂರ್ಣ ಮೊಬೈಲ್ ಬ್ಯಾಂಕಿಂಗ್ ಗ್ರಾಮವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈ ಗ್ರಾಮದಲ್ಲಿರುವ 321 ಕುಟುಂಬ ಗಳನ್ನು ಮೊಬೈಲ್ ಬ್ಯಾಂಕಿಂಗ್‌ಗೆ ಮೊಬೈಲ್ ನಂಬರ್ ಮತ್ತು ಆಧಾರ ಖಾತೆ ಯನ್ನು ಲಿಂಕ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ನಗದು ರದ್ದತಿಯ ಎಫೆಕ್ಟ್:

ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಬ್ಯಾಂಕಿನಲ್ಲಿ ವಾರಕ್ಕೆ 25 ಸಾವಿರ ರೂ. ಮಾತ್ರ ಡ್ರಾ ಮಾಡಲು ಅವಕಾಶ ಇರುವುದರಿಂದ ವಸತಿ ಯೋಜನೆ ಫಲಾನುಭವಿಗಳ ಖಾತೆಗೆ ಬಿಡುಗಡೆಯಾದ ಹಣ ತೆಗೆಯಲು ಕಷ್ಟವಾಗುತ್ತಿದೆ. ಇದರಿಂದ ನಮ್ಮ ಗುರಿ ಸಾಧನೆಗೆ ತೊಂದರೆಯಾಗಿದೆ. ಅಲ್ಲದೆ ಬ್ಯಾಂಕಿನವರು ಹಣ ಎಂದು ಹೇಳಿ ಫಲಾನುಭವಿಗಳನ್ನು ವಾಪಾಸ್ಸು ಕಳುಹಿಸುತ್ತಿದ್ದಾರೆ ಎಂದು ದೂರಿದರು. ಸರಕಾರದ ಯೋಜನೆಗೆ ಹಣವನ್ನು ಆದ್ಯತೆ ಮೇರೆಗೆ ತಕ್ಷಣವೇ ನೀಡಬೇಕು ಮತ್ತು 65ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕ್ಯೂನಲ್ಲಿ ನಿಲ್ಲಿಸದೆ ಹಣ ನೀಡಬೇಕು ಎಂದು ಸಂಸದೆ ಸೂಚನೆ ನೀಡಿದರು.

 ಉಡುಪಿ ಹಾಗೂ ಕುಂದಾಪುರ ತಾಲೂಕಿನಲ್ಲಿರುವ 53ಸಾವಿರ ಪಿಂಚಣಿ ದಾರರಿಗೆ ತಲಾ 500ರೂ.ನಂತೆ 2-3ಕೋಟಿ ರೂ. ಬಿಡುಗಡೆಯಾಗಿದೆ. ಇದೀಗ 500ರೂ. ನೋಟು ಇಲ್ಲದ ಕಾರಣ 100ರೂ. ನೋಟಿನ ಕೊರತೆ ಉಂಟಾಗಿದೆ. ಇದರಿಂದ ಸದ್ಯಕ್ಕೆ ಈ ತಿಂಗಳಲ್ಲಿ 20ಸಾವಿರ ಮಂದಿಗೆ ಪಿಂಚಣಿ ನೀಡಲು ಸಮಸ್ಯೆಯಾಗಿದೆ. ಹೀಗಾಗಿ 100ರೂ. ಮುಖಬೆಲೆಯ ನೋಟನ್ನು ಹೆಚ್ಚು ಒದಗಿಸಬೇಕು ಎಂದು ಅಂಚೆ ಇಲಾಖೆಯ ಅಧೀಕ್ಷಕ ರಾಜಶೇಖರ್ ಭಟ್ ಮನವಿ ಮಾಡಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ಬಂದರು ಮತ್ತು ಮೀನುಗಾರಿಕೆ ಇಲಾಖೆ ಕಾರ್ಯವೈಖರಿಯಿಂದ ಅಸಮಾಧಾನಗೊಂಡ ಸಂಸದರು, ಕೋಡಿಬೆಂಗ್ರೆಯಲ್ಲಿ ಬಾರ್ಜ್ ಖರೀದಿಸಿ ಬಳಸದಿರುವುದು ಮತ್ತು ಮೀನುಗಾರರಿಗೆ ನೆರವಾಗುವ ಕಾಮಗಾರಿಯಲ್ಲಿ ಇಂಜಿನಿಯರ್ ಗಳು ತೋರುವ ನಿರ್ಲಕ್ಷ್ಯದ ಬಗ್ಗೆ ಕಾರಣ ಕೇಳಿ ನೋಟೀಸು ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

 ಸಖಿ ವನ್‌ಸ್ಟಾಪ್ ಸೆಂಟರ್‌ನ ಕಾಮಗಾರಿ ಪ್ರಗತಿ ಪರಿಶೀಲಿಸಿದ ಅವರು ಎನ್‌ಎಚ್ ಅಧಿಕಾರಿಗಳು ಸಭೆಗೆ ಗೈರು ಹಾಜರಾದ ಬಗ್ಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರಲ್ಲದೆ, ಅವರ ಮೇಲಧಿಕಾರಿಗಳಿಗೆ ದೂರು ನೀಡಲು ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಕೋಡಿಕನ್ಯಾನ ಡ್ರೆಜ್ಜಿಂಗ್ ಕಾಮಗಾರಿಗೆ ಟೆಂಡರ್ ಆಗಿದ್ದು, ಗುತ್ತಿಗೆ ದಾರರು ಕಾಮಗಾರಿ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾಮ ಗಾರಿಗೆ ರಾಜ್ಯ ಸರಕಾರ 3ಕೋಟಿ ರೂ. ಮತ್ತು ಕೇಂದ್ರ ಸರಕಾರ 50ಲಕ್ಷ ರೂ. ಬಿಡುಗಡೆ ಮಾಡಿದೆ. ಇನ್ನು ಕೇಂದ್ರ ಸರಕಾರ ಹಣ ನೀಡಲು ಬಾಕಿ ಇರುವುದರಿಂದ ಆ ಹಣ ಬಿಡುಗಡೆಯಾಗದೆ ಕಾಮಗಾರಿಯನ್ನು ಗುತ್ತಿಗೆ ದಾರರು ಆರಂಭಿಸುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ನಾಲ್ಕು ದಿನಗಳ ಹಿಂದೆ 21 ದಿನಗಳ ಸಮಯಾವಕಾಶ ನೀಡಲಾಗಿದೆ ಎಂದು ಬಂದರು ಇಲಾಖೆಯ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

4141ರೇಷನ್ ಕಾರ್ಡ್ ರದ್ದು: 

ಪಡಿತರ ಚೀಟಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಶೇ.100ರಷ್ಟು ಆಧಾರ್ ಲಿಂಕ್ ಕಾರ್ಯ ಆಗಿದ್ದು, 16467 ಪಡಿತರ ಚೀಟಿಯಲ್ಲಿ ಲಿಂಕ್ ಮಾಡದ 4141 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಜಿಲ್ಲೆಯಲ್ಲಿ 7,71,300 ಮಂದಿ ಸದಸ್ಯರಿದ್ದು, ಅವರಲ್ಲಿ 185904 ಮಂದಿ ಸದಸ್ಯರನ್ನು ಕೈಬಿಡಲಾಗಿದೆ. ಪ್ರಸ್ತುತ 585396 ಮಂದಿಗೆ ಪಡಿತರ ನೀಡಲಾಗುತ್ತಿದೆ. ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆಯಿಂದಾಗಿ ಹಲವು ಗ್ರಾಪಂಗಳಲ್ಲಿ ಆರ್‌ಟಿಸಿ ತೆಗೆಯಲು ಸಮಸ್ಯೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ದೂರಿದರು.

ಯಾವುದೇ ಗ್ರಾಪಂ ಗಳಲ್ಲಿ ಸರ್ವರ್ ಸಮಸ್ಯೆಗಳು ಕಂಡುಬಂದರೆ ಬಿಎಸ್‌ಎನ್‌ಎಲ್ ಅಧಿಕಾರಿ ಗಳು ತಕ್ಷಣವೇ ಸ್ಪಂದಿಸಿ ಪರಿಹರಿಸಬೇಕು ಎಂದು ಸಂಸದೆ ಸೂಚಿಸಿದರು. ಎನ್‌ಆರ್‌ಎಚ್‌ಎಂನಿಂದ ಜಿಲ್ಲೆಗೆ 17.08ಕೋಟಿ ರೂ. ಬಜೆಟ್ ಮಂಜೂರಾಗಿದೆ. ಜಿಲ್ಲೆಯಲ್ಲಿ ಡೆಂಗ್ ಪ್ರಕರಣ ಇಳಿಮುಖವಾಗಿದ್ದು, ಕಳೆದ ತಿಂಗಳಲ್ಲಿ ಕೇವಲ 18 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಜಿಲ್ಲೆಯಲ್ಲಿ 568 ಪ್ರಕರಣಗಳು ಕಂಡುಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಮೊದಲಾದವರು ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News