ರಾಜೀವ್ ಗಾಂಧಿ ಮೇಲೆ ಹಲ್ಲೆ ಮಾಡಿದಾತನಿಂದ ಶ್ರೀಲಂಕಾ ಅಧ್ಯಕ್ಷರ ಸಾವಿನ ಭವಿಷ್ಯ!

Update: 2016-12-21 07:29 GMT

ಕೊಲಂಬೊ, ಡಿ.21: ಶ್ರೀಲಂಕೆಗೆ 1987ರಲ್ಲಿ ಭೇಟಿ ನೀಡಿದ್ದ ಭಾರತೀಯ ಪ್ರಧಾನಿ ರಾಜೀವ್‌ ಗಾಂಧಿ ಅವರ ಮೇಲೆ ಬಂದೂಕಿನಿಂದ ಹಲ್ಲೆ ಮಾಡಿದ ಮಾಜಿ ಸೈನಿಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ. 2017ರ ಜನವರಿ 26ರೊಳಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಾವಿಗೀಡಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾನೆ ಎಂದು ಸರ್ಕಾರ ದೂರಿದೆ.

ಮಾಧ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಮಾಲ್ ಬೋಪೇಜ್ ಈ ಬಗ್ಗೆ ಹೇಳಿಕೆ ನೀಡಿ, "ರಾಜೀವ್‌ ಗಾಂಧಿ ಮೇಲಿನ ಹಲ್ಲೆ ಆರೋಪದಲ್ಲಿ ಜೈಲು ಸೇರಿದ್ದ ವಿಜಿತಾ ರೊಹಾನಾ ವಿಜೆಮುನಿ ಇದೀಗ ಫೇಸ್‌ಬುಕ್ ಪೋಸ್ಟ್ ಮೂಲಕ ಸಿರಿಸೇನಾ ಅವರ ಸಾವಿನ ಭವಿಷ್ಯ ಬಹಿರಂಗಪಡಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ" ಎಂದು ಪ್ರಕಟಿಸಿದ್ದಾರೆ.

"ಜ್ಯೋತಿಷಿ ಎಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿ, ದೇಶದ ಅಧ್ಯಕ್ಷರು ಜನವರಿ 26ಕ್ಕೆ ಮುನ್ನ ಸಾಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾನೆ" ಎಂದು ಬೊಪಾಜ್ ಸುದ್ದಿಗಾರರಿಗೆ ತಿಳಿಸಿದರು. "ಇದರ ಹಿಂದೆ ಪಿತೂರಿ ಇರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದೇವೆ. ಇದು ಅಧ್ಯಕ್ಷರನ್ನು ಹತ್ಯೆ ಮಾಡುವ ವಿಸ್ತ್ರತ ಸಂಚು ಇರಬಹುದು ಎಂಬ ಶಂಕೆ ಇದೆ. ಇದಕ್ಕೂ ಮುನ್ನ ಸೈಬರ್ ಅಪರಾಧ ಏಜೆನ್ಸಿಗೆ ದೂರು ನೀಡಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜೀವ್‌ ಗಾಂಧಿಯವರು 1987ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾಗ ವಿಜೆಮುನಿ ನೌಕಾಪಡೆಯ ಗೌರವವಂದನೆ ಸಲ್ಲಿಸುವ ತಂಡದ ಸದಸ್ಯರಾಗಿದ್ದ. ಭಾರತ- ಶ್ರೀಲಂಕಾ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲು ಕೊಲಂಬೊಗೆ ಆಗಮಿಸಿದ ರಾಜೀವ್ ಗಾಂಧಿಯವರ ಮೇಲೆ ವಿಜೆಮುನಿ ಹಲ್ಲೆ ಮಾಡಿದ್ದ. ರಾಜೀವ್‌ ಗಾಂಧಿ ಗೌರವರಕ್ಷೆ ಸ್ವೀಕರಿಸುತ್ತಿದ್ದಾಗ ಬಂದೂಕು ಎತ್ತಿ ಹೊಡೆಯಲು ಮುಂದಾಗಿದ್ದ. ರಾಜೀವ್ ಗಾಂಧಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News