×
Ad

ಕ್ರಿಸ್ಮಸ್ ಹಂಚಿಕೊಳ್ಳುವ ಹಬ್ಬ: ಅ.ವಂ.ಡಾ.ಲೋಬೊ

Update: 2016-12-21 21:46 IST

ಉಡುಪಿ, ಡಿ.21: ಕ್ರಿಸ್ಮಸ್ ಎಂಬುದು ನಮ್ಮಲ್ಲಿರುವುದನ್ನು ಹಂಚಿಕೊಳ್ಳುವ ಹಬ್ಬ. ನಮ್ಮ ಮಧ್ಯೆ ಇರುವ ಹಸಿದವರು, ನಿರ್ಗತಿಕರು, ಅವಿದ್ಯಾವಂತರು ಹಾಗೂ ಕಷ್ಟಕಾರ್ಪಣ್ಯಗಳಿಗೆ ಈಡಾದವರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುವುದೇ ನಿಜವಾದ ಕ್ರಿಸ್ಮಸ್ ಆಚರಣೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಉಡುಪಿ ಧರ್ಮಪ್ರಾಂತದ ವತಿಯಿಂದ ಮಾಧ್ಯಮದ ಮಂದಿಯೊಂದಿಗೆ ಬಿಷಪ್ ಹೌಸ್‌ನಲ್ಲಿ ನಡೆದ ಕ್ರಿಸ್‌ಮಸ್ ಸ್ನೇಹಕೂಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಏಸುಕ್ರಿಸ್ತನನ್ನು ದೇವರು ಈ ಲೋಕಕ್ಕೆ ಕಳುಹಿಸಿದ ದಿನವೇ ಕ್ರಿಸ್ಮಸ್. ಇದನ್ನು ಶಾಂತಿ, ಸೌಹಾರ್ದತೆ, ಸಹೋದರತೆಯ ದಿನವಾಗಿ ಆಚರಿಸಬೇಕು. ಆದರೆ ಇಂದು ಜಗತ್ತಿನಲ್ಲಿ ಶಾಂತಿ-ಪ್ರೀತಿಗಳು ಕಡಿಮೆಯಾಗುತ್ತಿದೆ. ಅಶಾಂತಿಯ ವಾತಾವರಣ ಕಂಡುಬರುತ್ತಿದೆ. ನಾವೆಲ್ಲರೂ ಶಾಂತಿದೂತರಾಗಿ ಸಮಾಜವನ್ನು ಕಾಡುತ್ತಿರುವ ಅನಿಷ್ಠಗಳನ್ನು ದೂರಗೊಳಿಸಿ ಶಾಂತಿಯನ್ನು ಕಾಪಾಡಲು ಸಾಧ್ಯ ವಾದರೆ ಅದೇ ನಿಜವಾದ ಕ್ರಿಸ್ಮಸ್ ಎಂದು ಡಾ.ಲೋಬೊ ನುಡಿದರು.

ಸಮಾರಂಭದಲ್ಲಿ ಸಿಎನ್‌ಬಿಸಿ ಸಾರ್ಥಕ್ ನಾರಿ ಪ್ರಶಸ್ತಿ ಪಡೆದ ಉಡುಪಿಯ ತಾಪಂ ಸದಸ್ಯೆ ಹಾಗೂ ಸಮಾಜ ಸೇವಕಿ ವರೋನಿಕಾ ಕರ್ನೇಲಿಯೊ ಅವರನ್ನು ಧರ್ಮಪ್ರಾಂತದ ವತಿಯಿಂದ ಬಿಷಪ್ ಅವರು ಸನ್ಮಾನಿಸಿದರು. ಧರ್ಮ ಧರ್ಮಗಳ ಮಧ್ಯೆ ಶಾಂತಿ, ಸಹೋದರತೆ, ಸೌಹಾರ್ದತೆಯನ್ನು ರಕ್ಷಿಸಲು ಎಲ್ಲರು ಶ್ರಮಿಸಬೇಕು ಎಂದವರು ನುಡಿದರು.

ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ ಪ್ರಸಾದ್ ಪಾಂಡೇಲು ಉಪಸ್ಥಿತ ರಿದ್ದರು. ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಳನ್ನಾಡಿದರು. ವಂ.ಚೇತನ್ ಲೋಬೊ ಕಾರ್ಯಕ್ರಮ ನಿರೂಪಿಸಿದರೆ, ಧರ್ಮಪ್ರಾಂತದ ಪತ್ರಿಕಾ ಸಮನ್ವಯಕಾರ ಮೈಕೆಲ್ ರಾಡ್ರಿಗಸ್ ವಂದಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News