ನಿಮಗೇಕೆ ಈವರೆಗೆ ರಾಷ್ಟ್ರ ಪ್ರಶಸ್ತಿ ಬಂದಿಲ್ಲ ಎಂದು ಕೇಳಿದ್ದಕ್ಕೆ ಶಾರುಕ್ ನೀಡಿದ ಉತ್ತರವೇನು ?

Update: 2016-12-22 07:01 GMT

ಮುಂಬೈ, ಡಿ.22: ಮುಂಬೈ ಮಹಾನಗರಿಯಲ್ಲಿರುವ ಬಾಲಿವುಡ್ ನಟ ಶಾರುಕ್ ಖಾನ್ ಅವರ ವೈಭವೋಪೇತ ಮನೆಯಲ್ಲಿ ಅವರು ಪಡೆದ ಹಲವಾರು ಪ್ರಶಸ್ತಿ ಹಾಗೂ ಟ್ರೋಫಿಗಳಿವೆ. ಆದರೆ ಈ ಪ್ರಶಸ್ತಿಗಳಲ್ಲಿ ರಾಷ್ಟ್ರಪ್ರಶಸ್ತಿ ಮಾತ್ರ ಇಲ್ಲ. ಈ ಪ್ರತಿಷ್ಠಿತ ಪ್ರಶಸ್ತಿ ಈ ಪ್ರತಿಭಾವಂತ ನಟನ ಪಾಲಿಗೆ ಇನ್ನೂ ಒಲಿದು ಬಂದಿಲ್ಲ. ತನ್ನ ಈ ಹಿಂದಿನ ನಿರ್ವಹಣೆ ರಾಷ್ಟ್ರ ಪ್ರಶಸ್ತಿ ಗಳಿಸುವಷ್ಟು ಅರ್ಹವಾಗಿರದೇ ಇರಬಹುದು ಎಂಬುದು ಈ ನಟನ ಅನಿಸಿಕೆ.

ನಿಮಗೇಕೆ ಇಲ್ಲಿಯ ತನಕ ರಾಷ್ಟ್ರಪ್ರಶಸ್ತಿ ಬಂದಿಲ್ಲ ಎಂಬ ಪ್ರಶ್ನೆಗೆ ಶಾರುಕ್ ಉತ್ತರ ಹೀಗಿದೆ, ‘‘ನಾನಿರುವ ಸ್ಥಳದಲ್ಲಿರುವ ಪ್ರೇಕ್ಷಕರು, ತೀರ್ಪುಗಾರರು ಮತ್ತು ಚಿತ್ರ ನಿರ್ಮಾತೃಗಳು ಬಹಳಷ್ಟು ಒಳ್ಳೆಯವರಾಗಿರುವುದರಿಂದ ನನಗೆ ಅನೇಕ ಪ್ರಶಸ್ತಿಗಳು ಬಂದಿವೆ. ಹಾಗೆಯೇ ಕುಳಿತುಕೊಂಡು ನನಗೆ ಆ ಚಿತ್ರಕ್ಕೆ ಪ್ರಶಸ್ತಿ ದೊರೆಯಬಹುದಿತ್ತು ಎಂದು ನಾನು ಯೋಚಿಸತೊಡಗಿದರೆ ಆ ಪ್ರಶಸ್ತಿಗೇ ಅವಮಾನ ಮಾಡಿದಂತೆ. ನನಗೆ ಪ್ರಶಸ್ತಿ ದೊರೆತಿಲ್ಲವೆಂದಾದರೆ ನಾನು ಅದಕ್ಕೆ ಅರ್ಹನಲ್ಲವೆಂದು ಅರ್ಥ. ಅದು ಅಷ್ಟೇ ಸರಳ. ಆದುದರಿಂದ ನಾನು ಇಲ್ಲಿಯವರೆಗೆ ನಟಿಸಿದ ಚಿತ್ರಗಳಲ್ಲಿ ರಾಷ್ಟ್ರಪ್ರಶಸ್ತಿ ದೊರೆಯುವಂತಹ ಅಭಿನಯ ನಾನು ನೀಡಿಲ್ಲ. ಪ್ರಶಸ್ತಿಗಾಗಿ ನಾನು ಅಭಿನಯಿಸುತ್ತಿಲ್ಲ. ಚಿತ್ರ ಚೆನ್ನಾಗಿ ಮೂಡಿ ಬರಬೇಕೆಂಬುದೇ ನನ್ನ ಇಚ್ಛೆ. ನನಗೆ ಅಂತಹ ಪ್ರಶಸ್ತಿಯೇನಾದರೂ ಬಂದರೆ ಆ ಪ್ರಶಸ್ತಿಗೆ ನಾನು ಅರ್ಹನೆಂದು ನಾನು ತಿಳಿಯುತ್ತೇನೆ’’ ಎಂದು ಮುಂಬೈ ನಗರದ ಅಮೆರಿಕ ರಾಯಭಾರಿ ಕಚೇರಿಯಲ್ಲಿ ನಡೆದ ಇಂಡಿಯನ್ ಅಕಾಡಮಿ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದರು.

‘‘ವಿಶ್ವದಾದ್ಯಂತ ಅತ್ಯುತ್ತಮ ಸಿನೆಮಾಗಳಿಗೆ ನೀಡಲಾಗುವ ಹಲವಾರು ಪ್ರಶಸ್ತಿಗಳಿದ್ದರೂ ಆಸ್ಕರ್ ಪ್ರಶಸ್ತಿಗೆ ತನ್ನದೇ ಆದ ಮಹತ್ವವಿದೆ. ಅಂತೆಯೇ ಭಾರತದಲ್ಲೂ ಕೂಡ ಇಂತಹುದೇ ಒಂದು ಪ್ರಶಸ್ತಿ ನೀಡುವ ಪರಿಪಾಠವಿರಬೇಕು’’ ಎಂದು ಶಾರುಕ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News