ಕಾಂಗ್ರೆಸ್ ಪಕ್ಷದಿಂದ ಕಿತ್ತೊಗೆದರೆ ಅಂದಿನಿಂದಲೇ ಹೋರಾಟ ಆರಂಭ
ಮಂಗಳೂರು, ಡಿ.22: ‘‘ನನಗೆ ಹೈಕಮಾಂಡ್‌ನಿಂದ ಯಾವುದೇ ನೋಟಿಸ್ ಬಂದಿಲ್ಲ. ನನ್ನನ್ನು ಯಾರೂ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿಲ್ಲ. ನೆಹರೂ ಕಾಲದಿಂದಲೂ ನನ್ನ ಕುಟುಂಬ ಪಕ್ಷದಲ್ಲಿದೆ. ಇದೀಗ ಉಚ್ಚಾಟಿಸುವುದಿದ್ದಲ್ಲಿ ಇವತ್ತೇ ಆಗಲಿ. ಈ ಕ್ಷಣದಿಂದಲೇ ನನ್ನ ಹೋರಾಟ ಆರಂಭವಾಗಲಿದೆ’’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಉಚ್ಚಾಟಿಸಬಹುದು. ಆದರೆ ನನ್ನ ರಕ್ತದಿಂದ ಕಾಂಗ್ರೆಸ್ಸನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದೀಗ ಉಚ್ಚಾಟಿಸಿದರೆ ಯಾವುದೇ ಬೇಸರವಿಲ್ಲ ಎಂದರು. ಪಕ್ಷದ ಹಿತಕ್ಕಾಗಿ ಸಲಹೆಗಳನ್ನು ನೀಡಿದಾಗ ನನ್ನನ್ನು ಪಕ್ಷ ವಿರೋಧಿ ಎನ್ನುತ್ತಾರೆ. ಪಕ್ಷದಲ್ಲಿ ವಾಕ್ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿದೆ. ಈ ರೀತಿಯ ಪರಿಸ್ಥಿತಿ ಇರುವಾಗು ನಾನೇನು ಮಾಡಲಿ ಎಂದು ಪೂಜಾರಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪಕ್ಷಕ್ಕಿಂತ ಮೇಟಿ ಅವರೇ ಮುಖ್ಯವಾಗಿದ್ದರೆ. ಸಿಎಂಗೆ ನಾಚಿಕೆಯಾಗಬೇಕು ಎಂದ ಪೂಜಾರಿ ಅವರು, ಮಾನ-ಮರ್ಯಾದೆ ಇದ್ದರೆ ಮೇಟಿಯನ್ನು ಪಕ್ಷದಿಂದ ಕಿತ್ತೊಗೆಯಲಿ ಎಂದರು.
ನೋಟು ರದ್ದತಿಯಿಂದ ಜನರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟು ಅಮಾನ್ಯವನ್ನು ಹಿಂಪಡೆದು ಪ್ರಧಾನಿ ಮೋದಿಯವರು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ ಪೂಜಾರಿ, ಮೋದಿಯನ್ನು ಪ್ರಧಾನಿ ಪಟ್ಟದಿಂದ ಕಿತ್ತೆಸೆದರೆ ದೇಶ ಉಳಿಯುತ್ತದೆ. ಆ ಕೆಲಸವನ್ನು ಮಾಡುವ ಮೂಲಕ ವಿಶ್ವಾಸಾರ್ಹತೆ ಮೆರೆಯಿರಿ ಎಂದು ಆರೆಸ್ಸೆಸ್‌ನವರಿಗೆ ಕಿವಿಮಾತು ಹೇಳಿದರು.