×
Ad

ರಾಷ್ಟ್ರಮಟ್ಟದ ಕರಕುಶಲ ವಸ್ತುಪ್ರದರ್ಶನಕ್ಕೆ ಚಾಲನೆ

Update: 2016-12-22 18:32 IST

ಮಂಗಳೂರು, ಡಿ.22: ಡಾ. ಶಿವರಾಮ್ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನಕ್ಕೆ ಗುರುವಾರ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಪ್ರವಾಸೋದ್ಯಕ್ಕೆ ಪೂರಕವಾದ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಹೇಳಿದರು.

ಇಲ್ಲಿ ಆಯೋಜಿಸಲಾದ ಈ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ ಎಂದ ಜೆ.ಆರ್.ಲೋಬೊ, 3ಡಿ ಪ್ಲಾನೆಟೇರಿಯಂಗೆ ಸರಕಾರದಿಂದ 5 ಕೋ. ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಒತ್ತಾಯಿಸಲಾಗಿದೆ ಎಂದರು.

ಕಣ್ಮನ ಸೆಳೆದ ಕರಕುಶಲ ಪ್ರದರ್ಶನ

ಪಿಲಿಕುಳದಲ್ಲಿ 10 ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನ ಮೇಳದಲ್ಲಿ ಕರಕುಶಲ ವಸ್ತುಗಳು ಪ್ರೇಕ್ಷಕರ ಕಣ್ಮನ ಸೆಳೆದವು. ಸುಮಾರು 25 ವಿವಿಧ ಕರಕುಶಲ ಮಳಿಗೆಗಳು ಜನರಿಂದ ತುಂಬಿದ್ದವು. ಮೇಳದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ನಗು ಮುಖದಿಂದಲೇ ಸ್ವಾಗತಿಸಿ ವಸ್ತುಗಳ ಪರಿಚಯಿಸುತ್ತಿದ್ದರು. ಜೈಪುರ, ಉಜ್ಜಯಿನಿಗಳಿಂದ ಮೇಳಕ್ಕೆ ಆಗಮಿಸಿದ್ದರು.

ಕೈಯಿಂದ ತಯಾರಿಸಿದ ಕಾಟನ್ ಸಲ್ವಾರ್, ಚೂಡಿ, ಟಾಪ್, ಬೆಡ್‌ಶಿಟ್‌ಗಳ ಪ್ರದರ್ಶನವಿತ್ತು. ಗೃಹೋಪಯೋಗಿ ವಸ್ತುಗಳಾದ ರುಬ್ಬುಗಲ್ಲು, ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿದ ಸೌಟು, ಮೊರ, ಮಡಿಕೆ-ಕುಡಿಕೆ, ಹರವಿ, ಬಿದಿರಿನ ಕಲಾಕೃತಿಯ ಕುರ್ಚಿ, ಟೇಬಲ್‌ಗಳು, ಇಳಿಗೆ ಮಣಿ, ಪುಟ್ಟಿಗಳು ಆಕರ್ಷಣೀಯವಾಗಿದ್ದವು. ಅಡಿಕೆ ಎಲೆಯಿಂದ ತಯಾರಿಸಿದ ಟೋಪಿ, ರೊಟ್ಟಿಯನ್ನು ಹಾಕುವ ಕೆರಸಿಗಳ ಮಾರಾಟ ಬಿರುಸಿನಿಂದ ಸಾಗಿತ್ತು.

 ಬಿದಿರಿನಿಂದ ಕೈಯಲ್ಲಿ ತಯಾರಿಸಿದ ಮರವೊಂದಕ್ಕೆ ಬಣ್ಣ ಬಣ್ಣದ ಓಲೆ, ಜುಮುಕಿಗಳಿಂದ ಮದುವಣಗಿತ್ತಿಯಂತೆ ಶೃಂಗರಿಸಲಾಗಿತ್ತು. ಅವುಗಳ ಮುಂದೆ ಆಸಕ್ತರು ಸೆಲ್ಫಿಯ ಮೊರೆ ಹೋದರು. ಮಣ್ಣಿನಿಂದ ತಯಾರಿಸಿದ ಸುತ್ತು ದೀಪ, ಮ್ಯಾಜಿಕ್ ದೀಪ, ತುಳಸಿಕಟ್ಟೆಯ ಗೂಡುದೀಪ, ಲೋಬಾನು ಹಾಕುವ ಕುಡಿಕೆ, ತೆಂಗಿನಕಾಯಿ ಆಕೃತಿಯ ಹಣದ ಹುಂಡಿ, ಟೋಪಿ, ಚಪಾತಿ ಲಟ್ಟಿಸುವ ಮಣೆಯಂತಹ ಕರಕುಶಲ ವಸ್ತುಗಳು ಗಮನ ಸೆಳೆಯುತ್ತಿತ್ತು.

ಕಲಾತ್ಮಕ ನೇಯ್ಗೆಗೆ ಹೆಸರಾದ ಇಳಕಲ್ ಸೀರೆಗಳ ಅಂದವು ಎಲ್ಲರನ್ನು ತನ್ನತ್ತ ಸೆಳೆಯುವಷ್ಟು ಕಸೂತಿಯ ಮೆರಗು ಪಡೆದಿತ್ತು. ಇಳಕಲ್‌ನ ಕುಬಸದ ಕಣ, ಚದರಂಗಿ ಚುಕ್ಕೆ ಸೀರೆ, ಇಳಕಲ್ ಸೀರೆಗೆ ಧಾರವಾಡದ ಕಸೂತಿಯ ಸೀರೆಗಳು ಆಕರ್ಷಿಸಲ್ಪಡುತ್ತಿತ್ತು.

ಪಾಶ್ಚಾತ್ಯ ದೇಶಗಳ ಉಡುಗೆ ತೊಡುಗೆಗಳ ಭರಾಟೆಯಲ್ಲಿಯೂ ಇಳಕಲ್ ಸೀರೆಯ ಮಹತ್ವ ಕುಗ್ಗಿಲ್ಲ. ಕೈಮಗ್ಗದಿಂದ ನೇಯ್ದ ನೂಲಿನ ಇಳಕಲ್ ಸೀರೆಯನ್ನು ತಲೆತಲಾಂತರಗಳಿಂದ ಮಾರಾಟ ಮಾಡುತ್ತಾ ಬಂದಿದ್ದೇವೆ. ದೇಶದಲ್ಲಿ ನಡೆಯುವ ಎಲ್ಲ ಕರಕುಶಲ ವಸ್ತುಪ್ರದರ್ಶನ ಮೇಳದಲ್ಲಿ ಇಳಕಲ್ ಸೀರೆ ಬ್ರಾಂಡ್‌ನ್ನು ಕೊಂಡೊಯುತ್ತೇವೆ. ವಿವಿಧ ರಾಜ್ಯಗಳಿಂದ ನಮ್ಮ ಸೀರೆಗೆ ಬೇಡಿಕೆಯೂ ಬಂದಿದೆ.

ಶಂಕರ್, ಧಾರವಾಡ (ವ್ಯಾಪಾರಿ)...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News