ಅಕ್ರಮ ಅಡುಗೆ ಅನಿಲ ಸಿಲಿಂಡರ್ ವಶ
Update: 2016-12-22 19:19 IST
ಮಂಗಳೂರು, ಡಿ.22: ನಗರದ ಉರ್ವಸ್ಟೋರ್‌ನ ಮಾರ್ಕೆಟ್ ಪ್ರದೇಶಕ್ಕೆ ದಾಳಿ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು ಸೂಕ್ತ ದಾಖಲೆಗಳಿಲ್ಲದೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನಿರಿಸಿ ರಿಫಿಲ್ಲಿಂಗ್ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಆಸಿಫ್ ಆಲಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯು ಬಿ.ಪಿ.ಸಿ. ಹಾಗೂ ಕೊಂಕಣ್ ಗ್ಯಾಸ್ ಕಂಪೆನಿಯ ವಿವಿಧ ತೂಕದ 14 ಸಿಲಿಂಡರುಗಳನ್ನು ಬಳಸಿ ರಿಫಿಲ್ಲಿಂಗ್ ಮಾಡುತ್ತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯ ವಿರುದ್ಧ ಮಂಗಳೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ನಿರ್ದೇಶನದ ಮೇರೆಗೆ ಮಂಗಳೂರು ತಾಲೂಕು ಆಹಾರ ಶಿರಸ್ತೇದಾರರು ಹಾಗೂ ಅನೌಪಚಾರಿಕ ಪಡಿತರ ಕಚೇರಿಯ ಆಹಾರ ನಿರೀಕ್ಷಕರು ದಾಳಿಯಲ್ಲಿ ಪಾಲ್ಗೊಂಡಿದ್ದರು.