ಧಾರ್ಮಿಕ ಪ್ರಜ್ಞೆಯಿಂದ ಸೌಹಾರ್ದತೆ: ಕೇಮಾರು ಶ್ರೀ

Update: 2016-12-22 14:06 GMT

ಮಲ್ಪೆ, ಡಿ.22: ಧರ್ಮ ಧರ್ಮಗಳ ನಡುವೆ ನಾವು ಕಚ್ಚಾಟ ನಡೆಸುತ್ತಿದ್ದೇವೆ. ಆದರೆ ನಾವು ನಮ್ಮದೇ ಧರ್ಮದ ಅಧ್ಯಯನವನ್ನು ಇನ್ನೂ ಸರಿಯಾಗಿ ಮಾಡಿಲ್ಲ. ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚು ಹೆಚ್ಚು ಬೆಳೆದರೆ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯ ಮೂಡಲು ಸಾಧ್ಯ ಎಂದು ಕೇಮಾರು ಸಾಂದೀಪಿನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆಯ ವತಿಯಿಂದ ಮಂಗಳವಾರ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಆಯೋಜಿಸಲಾದ ಸೀರತ್ ಸೌಹಾರ್ದ ಕೂಟದಲ್ಲಿ ಅವರು ಆಶೀರ್ವಚನ ನೀಡಿದರು.

ಮಲ್ಪೆ ಯು.ಬಿ.ಎಂ. ಚರ್ಚ್‌ನ ಧರ್ಮಗುರು ಫಾ.ಕುಮಾರ್ ಸಾಲಿನ್ಸ್ ಮಾತನಾಡಿ, ದೇವರನ್ನು ಪ್ರೀತಿಮಾಡುವುದು ಎಂದರೆ ತ್ಯಾಗ ಮಾಡುವುದು. ನಮ್ಮ ದೇಹ ದೇಗುಲವಿದ್ದಂತೆ. ಯಾವ ದೇಹ ಪರಿಶುದ್ದವಾಗಿದೆಯೋ ಅಲ್ಲಿ ದೇವರಿದ್ದಾನೆ. ನಾವೆಲ್ಲ ದೇವರಿಗೆ ಮೆಚ್ಚುಗೆಯಾಗುವ ಬದುಕನ್ನು ನಡೆಸಬೇಕು ಎಂದು ತಿಳಿಸಿದರು.

  ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಇಂದು ಧರ್ಮನಿಷ್ಠೆ, ಧರ್ಮ ರಕ್ಷಣೆ ಎಂಬುದು ಕೇವಲ ಕಾಪಟ್ಯದ ದ್ಯೋತಕವಾಗಿದೆ. ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಾದರೆ ಒಳ್ಳೆಯ ಕೆಲಸಗಳನ್ನು ಮಾಡುವುದರೊಂದಿಗೆ ಧನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಉಡುಪಿ ಶಿಕ್ಷಣ ತಜ್ಞ ಎಂ.ವಿಠಲದಾಸ್ ಬನ್ನಂಜೆ, ಮಾಜಿ ಜಿಪಂ ಅಧ್ಯಕ್ಷ ಶಂಕರ್ ಎ.ಕುಂದರ್, ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಕಾಂಚನ್, ಉದ್ಯಮಿಗಳಾದ ಸಾಧು ಸಾಲ್ಯಾನ್ ಮಲ್ಪೆ, ಎಂ.ಡಿ.ಶ್ರೆಧರ್ ಉಪಸ್ಥಿತರಿದ್ದರು. ಯಾಸೀನ್ ಕೋಡಿಬೆಂಗ್ರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ಮಲ್ಪೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News