ಕಟಪಾಡಿ: ಸಮನ್ವತೆಯ ಚಿತ್ತಾರ - ಸೌಹಾರ್ದ ಕೂಟ
ಕಾಪು, ಡಿ.22: ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ವತಿ ಯಿಂದ ಕ್ರಿಸ್ತ ಜಯಂತಿಯ ಸಂಭ್ರಮದ ಪ್ರಯುಕ್ತ ಸಮನ್ವತೆಯ ಚಿತ್ತಾರ -ಸೌಹಾರ್ದ ಕೂಟವನ್ನು ಕಟಪಾಡಿಯಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ದೇಶದಲ್ಲಿ ಹಲವಾರು ಧರ್ಮಗಳಿದ್ದರೂ ಎಲ್ಲಾ ಧರ್ಮದ ದೇವರು ಒಂದೇ. ಧರ್ಮಗಳ ಆಚಾರ ವಿಚಾರ ಪೂಜಾವಿಧಾನ ಬೇರೆ ಬೇರೆ ಆದರೂ ಕೂಡ ಸಾರುವ ಸಂದೇಶ ಒಂದೆ. ಯಾವ ಧರ್ಮವೂ ಕೂಡ ಅನ್ಯಾಯದ ಪಥದಲ್ಲಿ ಹಾಗೂ ಪರರನ್ನು ದ್ವೇಷಿಸಲು ಸೂಚಿಸುವುದಿಲ್ಲ. ಪ್ರತಿಯೊಬ್ಬರೂ ಪರಸ್ಪರ ಗೆಳೆತನದೊಂದಿಗೆ ಸೌಹಾರ್ದತೆಯೊಂದಿಗೆ ಬಾಳಿದಾಗ ಶಾಂತಿ ನೆಲೆಸಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ಇಂದು ವೈಭವೀಕರಣದ ದಾಳಿಯಿಂದ ಮನುಷ್ಯ ಮಾನವೀ ಯತೆಯನ್ನು ಮರೆಯುತ್ತಿದ್ದಾನೆ. ಪ್ರತಿದಿನ ಹೆಚ್ಚುತ್ತಿರುವ ಕೌಟಂಬಿಕ ಸಮಸ್ಯೆ ಗಳಿಗೆ ಧಾರ್ಮಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು. ಇದರೊಂದಿಗೆ ಮಾನವ ಧರ್ಮದೊಂದಿಗೆ ಶಾಂತಿ ನಿರ್ಮಿ ಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪತ್ರಕರ್ತ ಮಹಮ್ಮದ್ ಆರೀಫ್ ಮಾತನಾಡಿ, ಹಿಂದೆ ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಜನರು ಅನೋನ್ಯತೆಯಿಂದ ಬಾಳುತ್ತಿದ್ದರೆ ಇಂದು ತಮ್ಮ ಮನೆಯ ಸುತ್ತ ಬೃಹತ್ ಗೋಡೆಗಳನ್ನು ಕಟ್ಟಿ ಪರಸ್ಪರ ಹೃದಯ ಗಳನ್ನು ಒಡೆದು ದೂರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೌಹಾರ್ದ ಕೂಟಗಳು ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತವೆ ಎಂದು ತಿಳಿಸಿದರು.
ಕಟಪಾಡಿ ಗ್ರಾಪಂ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ಅಂತರ್ ಧರ್ಮಿಯ ಸಂವಾದ ಆಯೋಗದ ನಿರ್ದೇಶಕ ಫಾ.ಲೂಯಿಸ್ ಡೆಸಾ, ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಸೌಹಾರ್ದ ಸಮಿತಿಯ ಸಂಚಾಲಕಿ ಬ್ಲಾಂಚ್ ಕರ್ನೆಲಿಯೋ ಉಪಸ್ಥಿತರಿ ದ್ದರು. ಚರ್ಚಿನ ಧರ್ಮಗುರು ವಂ.ರೋನ್ಸನ್ ಡಿಸೋಜ ಸ್ವಾಗತಿಸಿದರು. ವಾಲ್ಟರ್ ರುಜಾರಿಯೋ ವಂದಿಸಿದರು. ಕ್ಲಾರಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.