×
Ad

ಉಡುಪಿ: 25ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ

Update: 2016-12-22 20:14 IST

ಉಡುಪಿ, ಡಿ.22: ಪರ್ಯಾಯ ಪೇಜಾವರ ಮಠ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಡಿ.25ರ ರವಿವಾರ ಸಂಜೆ 5:45ರಿಂದ ರಾಜಾಂಗಣ ಸಮೀಏಪದ ವಾಹನ ನಿಲುಗಡೆ ಆವರಣದಲ್ಲಿ ನಡೆಯಲಿದೆ ಎಂದು ಘಟಕದ ಉಡುಪಿ ಘಟಕದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಳೆಯ ಮಕ್ಕಳಲ್ಲಿ ಸಾಂಸ್ಕೃತಿಕ ಮನಸ್ಸು ಕಟ್ಟಲು, ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗವನ್ನು ಹುಟ್ಟುಹಾಕಲು ಆರಂಭಗೊಂಡಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಈವರೆಗೆ ದೇಶ-ವಿದೇಶಗಳಲ್ಲಿ 500ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿವೆ ಎಂದವರು ಹೇಳಿದರು.

ಸಾಂಸ್ಕೃತಿಕ ವೈಭವದ ಎಲ್ಲಾ ಕಲಾಪ್ರಕಾರಗಳನ್ನು ಆಳ್ವಾಸ್‌ನ ವಿದ್ಯಾರ್ಥಿ ಕಲಾವಿದರೇ ನಡೆಸಿಕೊಡಲಿದ್ದಾರೆ. ತಮ್ಮ ವೇಷಭೂಷಣ, ಕೇಶಾಲಂಕಾರ ಹಾಗೂ ಮುಖವರ್ಣಿಕೆಗಳನ್ನು ಆಯಾ ವಿದ್ಯಾರ್ಥಿಗಳೇ ಮಾಡಿಕೊಳ್ಳುತ್ತಿರು ವುದು ಈ ತಂಡದ ಹೆಚ್ಚುಗಾರಿಕೆ ಎಂದವರು ಹೇಳಿದರು.

ಈಬಾರಿ ಒಟ್ಟು 350 ವಿದ್ಯಾರ್ಥಿ ಕಲಾವಿದರ ತಂಡ ಮೂರೂವರೆ ಗಂಟೆಗಳ ಪ್ರದರ್ಶನದಲ್ಲಿ ಮೋಹನಿಯಾಟ್ಟಂ, ಆಂಧ್ರದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ಡ್ಯಾನ್ಸ್, ಶ್ರೀಲಂಕಾದ ನೃತ್ಯ ವೈಭವ, ಒರಿಸ್ಸಾನದ ಗೋಟಿಪೂವ ಮತ್ತು ಯೋಗ ನೃತ್ಯ, ಭರತನಾಟ್ಯ ಆನಂದ ತಾಂಡವ, ಗುಜರಾತಿನ ಹುಡೋರಾಸ್, ಮಲ್ಲಕಂಬ, ಪುರುಲಿಯೊ ಸಿಂಹ ನೃತ್ಯ ಮುಂತಾದ ಕಲಾಪ್ರಕಾರಗಳನ್ನು ಪ್ರದರ್ಶಿಸಲಿವೆ ಎಂದರು.

 ಕಾರ್ಯಕ್ರಮವನ್ನು ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಖ್ಯಾತ ಸಾಹಿತಿ ವೈದೇಹಿ ಅಧ್ಯಕ್ಷತೆ ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಭುವನ ಪ್ರಸಾದ್ ಹೆಗ್ಡೆ, ಭುವನೇಂದ್ರ ಕಿದಿಯೂರು, ಆಳ್ವಾಸ್‌ನ ರಾಮಪ್ರಸಾದ್ ಕೆ., ರಾಧಾ ನಾಡಿಗ್, ಕೃಷ್ಣರಾಜ ಕರಬ ಹಾಗೂ ಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News