ನಾಳೆ ಅಟಲ್ ಟ್ರೋಫಿ ವಾಲಿಬಾಲ್
ಉಡುಪಿ, ಡಿ.22: ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಜನ್ಮದಿನದ ಪ್ರಯುಕ್ತ ಉದ್ಯಾವರ ಬಿಜೆಪಿ ಶಕ್ತಿ ಕೇಂದ್ರ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ನೇತೃತ್ವದಲ್ಲಿ ‘ಅಟಲ್ ಟ್ರೋಫಿ’ ಮುಕ್ತ ವಾಲಿಬಾಲ್ ಪಂದ್ಯಕೂಟವನ್ನು ಉದ್ಯಾವರ ಕಟ್ಟೆಗುಡ್ಡೆ ನವಚೇತನ ಯುವಕ ಮಂಡಲ ಮೈದಾನದಲ್ಲಿ ಆಯೋಜಿಸಿದೆ.
ಕೇರಳ (2), ತಮಿಳುನಾಡು(1), ಬೆಂಗಳೂರು (2), ಕುಂದಾಪುರ (1), ಉತ್ತರ ಕನ್ನಡ (1), ಶಿವಮೊಗ್ಗ-ಹಾಸನ (1) ಸೇರಿದಂತೆ ಒಟ್ಟು 16 ತಂಡಗಳು ರಾತ್ರಿ ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ ಎಂದು ದಿನಕರ ಬಾಬು ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾಟದ ಚಾಂಪಿಯನ್ ತಂಡ ಟ್ರೋಫಿಯೊಂದಿಗೆ 33,000ರೂ. ಪ್ರಥಮ ಬಹುಮಾನ, ರನ್ನರ್ ಅಪ್ ತಂಡ 22,000ರೂ., ತೃತೀಯ ಮತ್ತು ಚತುರ್ಥ ಸ್ಥಾನಿ ತಂಡಗಳು ಕ್ರಮವಾಗಿ 12,000 ಹಾಗೂ 6,000ರೂ. ಬಹುಮಾನ ಗೆಲ್ಲಲಿವೆ ಎಂದವರು ನುಡಿದರು.
ಸ್ಥಳೀಯ ತಂಡಗಳಿಗೆ ಸಂಜೆ 5:30ಕ್ಕೆ ವಾಲಿಬಾಲ್ ಸ್ಪರ್ಧೆ ನಡೆಯಲಿದೆ. ರಾತ್ರಿ ಉದ್ಘಾಟನೆಯ ಬಳಿಕ ಮುಕ್ತ ವಾಲಿಬಾಲ್ ಸ್ಪರ್ಧೆ ಪ್ರಾರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ನಾಯಕರಾದ ವೀರಯ್ಯ, ಶಾಸಕ ಸುನಿಲ್‌ಕುಮಾರ್, ಮಾಜಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್‌ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್, ಸಚಿನ್ ಕುಮಾರ್, ರಿಕೇಶ್ ಪಾಲನ್ ಉಪಸ್ಥಿತರಿದ್ದರು.