ಗೋರಕ್ಷಣೆಗಾಗಿ ರಾಜ್ಯಾದ್ಯಂತ ಗೋ-ಸತ್ಯಾಗ್ರಹ : ಪೇಜಾವರ ಶ್ರೀ
ಉಡುಪಿ, ಡಿ.22: ದೇಶಾದ್ಯಂತ ಗೋರಕ್ಷಣೆಯಾಗಬೇಕು, ಗೋಹತ್ಯೆಯನ್ನು ನಿಷೇಧಿಸಬೇಕು ಹಾಗೂ ರಾಜ್ಯದಲ್ಲಿ ಗೋಮಾಳ ಭೂಮಿಯ ಅಭಿವೃದ್ಧಿ ಯಾಗಬೇಕು ಎಂದು ಒತ್ತಾಯಿಸಿ ಮುಂದಿನ ಫೆ.26ರಂದು ಸಂತರ ನೇತೃತ್ವದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಂದ ಗೋ-ಸತ್ಯಾಗ್ರಹ ನಡೆಯಲಿದೆ ಎಂದು ಉಡುಪಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಗೋನಿಷೇಧದ ಪ್ರಸ್ತಾಪವಿದೆ ಹಾಗೂ ನ್ಯಾಯಲಯವೂ ಇದನ್ನು ಒಪ್ಪಿಕೊಂಡಿದೆ. ಆದುದರಿಂದ ದೇಶಾದ್ಯಂತ ಗೋವಧೆಯನ್ನು ನಿಷೇಧಿಸ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಂದು ದಿನದ ಗೋ-ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು. ಇದು ಯಾವುದೇ ಧರ್ಮ ಅಥವಾ ಜಾತಿ ವಿರುದ್ಧದ ಹೋರಾಟವಲ್ಲ ಎಂದವರು ನುಡಿದರು.
ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟವು ವಿಶ್ವಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ, ಬಜರಂಗ ದಳ, ಗೋ ಪರಿವಾರ, ಜಿಲ್ಲಾ ಗೋ ಆಂದೋಲನ ಸಮಿತಿಯ ಬೆಂಬಲದೊಂದಿಗೆ ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಈ ಸತ್ಯಾಗ್ರಹವನ್ನು ಆಯೋಜಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ವಿಎಚ್‌ಪಿಯ ಪ್ರಾತಂ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು.
ದೇಶಾದ್ಯಂತ ಗೋವಧೆ ನಿಷೇಧಿಸಬೇಕು, ಗೋಹಂತಕರಿಗೆ 7 ವರ್ಷ ಶಿಕ್ಷೆ ಹಾಗೂ ಒಂದು ಲಕ್ಷ ರೂ.ದಂಡ ವಿಧಿಸಬೇಕು. ಹಿಂಸಾತ್ಮಕ ಗೋಸಾಗಾಟ ಮಾಡುವವರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು ಪ್ರತಿ ಗೋವಿಗೆ 50,000ರೂ. ದಂಡ ವಿಧಿಸಬೇಕು. ರಾಜ್ಯದಲ್ಲಿ ಗೋಮಾಳ ಭೂಮಿಗಳನ್ನು ಗುರುತಿಸಿ,ಅಲ್ಲಿ ಹಸಿ ಹುಲ್ಲು ಬೆಳೆಸಿ ಸ್ಥಳೀಯ ಗೋವುಗಳಿಗೆ ಒದಗಿಸಬೇಕೆಂದು ತಮ್ಮ ಬೇಡಿಕೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಕಟೀಲು ದಿನೇಶ್ ಪೈ, ಜಿಲ್ಲಾ ಸಂಚಾಲಕ ಹರೀಶ್ ರಾವ್ ಉಪಸ್ಥಿತರಿದ್ದರು.