ಅಲೆಪ್ಪೊ ವಿಜಯ, ರಶ್ಯ, ಇರಾನ್‌ಗಳ ವಿಜಯವೂ ಹೌದು: ಅಸಾದ್
Update: 2016-12-22 21:20 IST
ಅಮ್ಮಾನ್, ಡಿ. 22: ಉತ್ತರದ ನಗರ ಅಲೆಪ್ಪೊದ ಪೂರ್ಣ ನಿಯಂತ್ರಣವನ್ನು ಮತ್ತೆ ಪಡೆದಿರುವುದು ಸಿರಿಯದಂತೆಯೇ, ಮಿತ್ರ ದೇಶಗಳಾದ ರಶ್ಯ ಮತ್ತು ಇರಾನ್‌ಗಳಿಗೂ ಲಭಿಸಿದ ವಿಜಯವಾಗಿದೆ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್ ಗುರುವಾರ ಹೇಳಿದ್ದಾರೆ.
ಅಲೆಪ್ಪೊದಲ್ಲಿ ಪಡೆದ ಜಯವು ಸಿರಿಯ ನೆಲದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸುವತ್ತ ಹಾಗೂ ಯುದ್ಧವನ್ನು ಕೊನೆಗಿಳಿಸುವುದಕ್ಕೆ ಸರಿಯಾದ ಸನ್ನಿವೇಶಗಳನ್ನು ನಿರ್ಮಿಸುವತ್ತ ಇಟ್ಟ ದೃಢ ಹೆಜ್ಜೆಯಾಗಿದೆ ಎಂದು ಇರಾನ್‌ನ ಹಿರಿಯ ಅಧಿಕಾರಿಗಳ ನಿಯೋಗವೊಂದನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಹೇಳಿದರು.
ರಶ್ಯದ ಯುದ್ಧ ವಿಮಾನಗಳು ಅಲೆಪ್ಪೊ ಬಂಡುಕೋರ ಪ್ರಾಬಲ್ಯದ ನೆಲೆಗಳ ಮೇಲೆ ನೂರಾರು ಭೀಕರ ಬಾಂಬ್ ದಾಳಿಗಳನ್ನು ನಡೆಸಿವೆ ಹಾಗೂ ಇರಾನ್ ಬೆಂಬಲಿತ ಹೋರಾಟಗಾರರು ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ನುಗ್ಗಿ ಬಂಡುಕೋರರೊಂದಿಗೆ ಹೋರಾಡಿದ್ದಾರೆ.