ಐವನ್ ನೇತೃತ್ವದಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ
ಮಂಗಳೂರು,ಡಿ.22: ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಗುರುವಾರ ನಗರದ ಕಂಕನಾಡಿ ಮಾರುಕಟ್ಟೆ ಮೈದಾನದಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಿಸಲಾಯಿತು. ಕ್ರಿಸ್‌ಮಸ್ ಟ್ರೀಯ ದೀಪಗಳನ್ನು ಬೆಳಗುವ ಮೂಲಕ ಬೋಸ್ಲಂ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರ್ವ ಧರ್ಮ ಸಂದೇಶ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ವಿಶ್ವೇಶ್ವರಿ ಇತರರನ್ನು ಕ್ಷಮಿಸಿ ಮತ್ತು ಕಹಿ ಘಟನೆಗಳನ್ನು ಮರೆಯಿರಿ ಎನ್ನುವ ಕ್ರಿಸ್ತರ ಸಂದೇಶ ನೆಮ್ಮದಿಯ ಹಾಗೂ ಸೌಹಾರ್ದಯುತ ಜೀವನಕ್ಕೆ ದಾರಿ ಎಂದು ಅಭಿಪ್ರಾಯಪಟ್ಟರು.
ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುರ್ರಶೀದ್ ಉಳ್ಳಾಲ್, ಫಾ. ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೊ ಶುಭ ಹಾರೈಸಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಶಾಸಕ ಜೆ.ಆರ್. ಲೋಬೊ ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮೇಯರ್ ಹರಿನಾಥ್, ಮನಪಾ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಮುಡಾದ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಡಾ. ಕವಿತಾ, ನಟಿ ಎಸ್ತೆರ್ ನೊರೆನ್ಹಾ, ನ್ಯಾಯವಾದಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಕ್ರಿಸ್ಮಸ್ ಸಂಭ್ರಮಾಚರಣೆ ಪ್ರಯುಕ್ತ ಕ್ರಿಸ್ಮಸ್ ನಕ್ಷತ್ರ, ಕ್ಷೇತ್ರ ಪ್ರದರ್ಶನ ಮತ್ತು ಸ್ಪರ್ಧೆ, ಕ್ಯಾರಲ್ ಸಂಗೀತ ಕಾರ್ಯಕ್ರಮ, ಅಕ್ಕಿ ವಿತರಣೆ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಜರಗಿತು.