×
Ad

ಮರಳುಗಾರಿಕೆ: ಹಸಿರುಪೀಠದ ವಿಚಾರಣೆ ಜ.5ಕ್ಕೆ ಮುಂದೂಡಿಕೆ

Update: 2016-12-22 22:26 IST

ಉಡುಪಿ, ಡಿ.22: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಚೆನ್ನೈ ಹಸಿರು ಪೀಠ ಹೊರಡಿಸಿರುವ ತಡೆಯಾಜ್ಞೆ ತೆರವುಗೊಳಿಸಲು ನಡೆಯುತ್ತಿರುವ ವಿಚಾರಣೆ ಇಂದು ಮುಂದುವರಿದು ಅಪೂರ್ಣಗೊಂಡಿದ್ದು ಜ.5ಕ್ಕೆ ಮುಂದೂಡಲಾಗಿದೆ.
 ಗುರುವಾರ ನಡೆದ ವಿಚಾರಣೆ ವೇಳೆ ವಾದ-ಪ್ರತಿವಾದ ಮುಕ್ತಾಯ ಗೊಂಡಿದ್ದು, ದೂರುದಾರ ಉದಯ ಸುವರ್ಣ ಅವರ ಪ್ರತಿಹೇಳಿಕೆಗಾಗಿ ಜ. 5ಕ್ಕೆ ದಿನಾಂಕವನ್ನು ನ್ಯಾಯಾಧೀಶರು ನಿಗದಿಪಡಿಸಿದರು. ಸಂಜೆ ಕೋರ್ಟ್ ಸಮಯ ಮುಕ್ತಾಯವಾಗಿದ್ದರಿಂದ ಉದಯ ಸುವರ್ಣ ಅವರ ಪ್ರತಿಹೇಳಿಕೆ ಪಡೆಯಲಾಗದ ಹಿನ್ನೆಲೆಯಲ್ಲಿ ಜ. 5ನ್ನು ನಿಗದಿಪಡಿಸಲಾಗಿದೆ.
ಚೆನ್ನೈನ ಹಸಿರು ಪೀಠದಲ್ಲಿ ಉಡುಪಿ ಜಿಲ್ಲಾ ಹೊಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಜೆ. ಮೆಂಡನ್, ಸುಧಾಕರ್ ಪೂಜಾರಿ ಕಲ್ಯಾಣಪುರ, ಸತ್ಯರಾಜ್ ಬಿರ್ತಿ ಅವರ ಪರ ವಕೀಲರಾದ ಚೆನ್ನೈಯ ಅರವಿಂದ್ ಪಾಂಡ್ಯನ್, ಬೆಂಗಳೂರಿನ ಹೈಕೋರ್ಟ್ ವಕೀಲ ಶಶಿಕಿರಣ್ ಶೆಟ್ಟಿ, ಕುಂದಾಪುರದ ನ್ಯಾಯವಾದಿಗಳಾದ ರಮೇಶ್ ಹತ್ವಾರ್, ಶಿವರಾಜ್ ಹೆಗ್ಡೆ, ಅರ್ಜಿದಾರ ಉದಯ ಸುವರ್ಣ ಪರವಾಗಿ ವಕೀಲ ರಂಜನ್ ಶೆಟ್ಟಿ ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆಯಿಂದ ಉಡುಪಿ ತಾಲೂಕಿನ ಬೈಕಾಡಿ, ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನತೆಗೆ ಉಂಟಾದ ಸಮಸ್ಯೆಗಳಿಗೆ ಸರಕಾರ, ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದಾಗ ಬೈಕಾಡಿಯ ಉದಯ ಸುವರ್ಣ ನೇತೃತ್ವದಲ್ಲಿ ಗ್ರಾಮಸ್ಥರು ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು, ಕಳೆದ ಮೇ17ರಿಂದ ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News