ಕೇಂದ್ರ ಸಕಾರ ಜನಜೀವನದ ಜೊತೆ ಚೆಲ್ಲಾಟವಾಡುತ್ತಿದೆ: ಕೆ.ಎ.ಸಿದ್ದೀಕ್
ಪುತ್ತೂರು, ಡಿ.23: ಕೇಂದ್ರ ಸರಕಾರದ ಜನವಿರೋಧಿ ನೀತಿಯಿಂದಾಗಿ ಬಡವರು ಕಂಗಾಲಾಗಿ ಹೋಗಿದ್ದಾರೆ, ಈಗಾಗಲೇ ನೋಟು ನಿಷೇಧದಿಂದ ತತ್ತರಿಸಿರುವ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಯೇರಿಕೆ ಮಾಡುವುದರ ಮೂಲಕ ಕೇಂದ್ರ ಸರಕಾರ ಮಾರಕ ಹೊಡೆತ ನೀಡಿದೆ. ಜನಸಾಮಾನ್ಯರ ಜೀವನದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಎಸ್‌ಡಿಟಿಯು ಅಟೋ ಯೂನಿಯನ್ ಗೌರವಾಧ್ಯಕ್ಷ ಕೆ.ಎ.ಸಿದ್ದಿಕ್ ಹೇಳಿದರು.
ಅವರು ಶುಕ್ರವಾರ ಪುತ್ತೂರು ಬಸ್ಸು ನಿಲ್ದಾಣ ಸಮೀಪದ ಗಾಂಧಿಕಟ್ಟೆ ಬಳಿ ಎಸ್‌ಡಿಟಿಯು ತಾಲೂಕು ಸಮಿತಿ ವತಿಯಿಂದ ಬೆಲೆಯೇರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದರೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಾವುದೇ ಪ್ರತಿಭಟನೆ ನಡೆಸದೆ ಮೌನಕ್ಕೆ ಶರಣಾಗಿದೆ ಎಂದು ಆರೋಪಿಸಿದ ಅವರು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಎಲ್ಲಾ ಅಟೋ ಯೂನಿಯನ್‌ಗಳು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು. ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಬಾತಿಷಾ ಬಡಕ್ಕೋಡಿ ಮಾತನಾಡಿ ಪೆಟ್ರೋಲ್ ಬೆಲೆಯೇರಿಕೆಯಿಂದಾಗಿ ಬಡಪಾಯಿ ಅಟೋ ಚಾಲಕರು ಕಂಗಾಲಾಗಿದ್ದಾರೆ. ತಮ್ಮ ದೈನಂದಿನ ಜೀವನದ ಬಗ್ಗೆಯೇ ಚಿಂತಿತರಾಗಿದ್ದಾರೆ. ಮೊದಲೇ ಬ್ಯಾಡ್ಜ್ ವಿಚಾರದಲ್ಲಿ ಅಟೋ ಚಾಲಕರ ಮೇಲೆ ಗದಾಪ್ರಹಾರ ಮಾಡಲಾಗುತ್ತಿದ್ದು ಇದೀಗ ಪೆಟ್ರೋಲ್ ಬೆಲೆ ಏರಿಕೆ ಅಟೋ ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ ಎಂದರು. ಸವಣೂರು ಗ್ರಾ.ಪಂ ಸದಸ್ಯ ಎಂ.ಎ ರಫೀಕ್ ಮಾತನಾಡಿ ಅಚ್ಚೇ ದಿನ್ ಎಂದು ಅಧಿಕಾರ ಪಡೆದ ಬಿಜೆಪಿ ಶ್ರೀಮಂತರಿಗೆ ಅಚ್ಚೇದಿನ್ ದಯಪಾಲಿಸಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಡಿಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾಂತೂರು, ಜೊತೆಕಾರ್ಯದರ್ಶಿ ಉಬೈದ್ ಪರ್ಪುಂಜ, ಕೊಶಾಧಿಕಾರಿ ಬಿ.ಕೆ ಅಶ್ರಫ್, ಪ್ರಮುಖರಾದ ಅಲಿ ನಾಜೂಕ್, ಉಮ್ಮರ್ ಸಂಪ್ಯ, ಹಂಝ ಮೊಟ್ಟೆತ್ತಡ್ಕ, ಸಾಬಿರ್ ಬನ್ನೂರು, ಬಾತಿಷಾ ವಂದಿಸಿದರು. ಪ್ರತಿಭಟನೆ ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.