×
Ad

16 ವರ್ಷಕ್ಕೆ ಅಮ್ಮನಾಗಿ, 23ವರ್ಷಕ್ಕೆ ಅಂತ್ಯಕಂಡ ಎಂಟಿವಿ ರಿಯಾಲಿಟಿ ಸ್ಟಾರ್

Update: 2016-12-23 16:15 IST

2010ರಲ್ಲಿ ಎಂಟಿವಿ ಹಿಟ್ ರಿಯಾಲಿಟಿ ಶೋ ಸ್ಟಾರ್ ಆಗಿ ಬೆಳಕಿಗೆ ಬಂದಿದ್ದ ವಲೇರಿ ಫೇರ್‌ಮೆನ್ ಬುಧವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೇವಲ 23 ವರ್ಷ ವಯಸ್ಸಿಗೆ ಈ ಅದ್ಭುತ ಪ್ರತಿಭೆ ಮಾದಕವಸ್ತು ವ್ಯಸನಕ್ಕೆ ಬಲಿಯಾಗಿದ್ದಾಳೆಂದು ವರದಿಯಾಗಿದೆ. ಮಿತಿಮೀರಿದ ಮಾದಕ ಬಳಕೆ ಚಟ ಅವಳ ಸಾವಿಗೆ ಕಾರಣವಾಗಿದ್ದು, ಸ್ವಚ್ಛಂದ ಜೀವನಶೈಲಿಯ ಪ್ರತೀಕವಾಗಿದ್ದ ಆಕೆ ತನ್ನ ಹದಿನಾರನೆ ವಯಸ್ಸಿಗೆ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಳು. ಪುತ್ರಿ ನಿವಾಯೊಹ್ನಾಳಿಗೆ ಈಗ ಏಳುವರ್ಷ ವಯಸ್ಸು, ಪೊಲೀಸರನ್ನೇ ವಂಚಿಸಿದ ಪ್ರಕರಣದಲ್ಲಿ ಕಳೆದ ವಾರ ವಲೇರಿಯನ್ನು ಬಂಧಿಸಲಾಗಿತ್ತು.

ರಿಯಾಲಿಟಿ ಸ್ಟಾರ್‌ಳ ಸಾವನ್ನು ಗೆಳೆಯರು ಮತ್ತು ಕುಟುಂಬ ಮೂಲಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನಿನ್ನೆ ದೃಢಪಡಿಸಿತ್ತು. ವಲೇರಿಗೆ ಸಂಗೀತಗಾರ ರಸ್‌ಬೋಸ್‌ನೊಂದಿಗೆ ಮದುವೆ ನಿಶ್ಚಿತಾರ್ಥ ನಡೆದಿತ್ತು ಎನ್ನಲಾಗಿದೆ. ಎಂಟಿವಿ ಮಾದಕವಸ್ತು ಸೇವನೆಗೆ ವಲೇರಿ ಬಲಿಯಾಗಿದ್ದಾಳೆಂದು ತಿಳಿಸಿದೆ. ಮಾದಕವಸ್ತು ಚಟದಿಂದ ಸುದೀರ್ಘಕಾಲದಿಂದ ವಲೇರಿ ನರಳುತ್ತಿದ್ದಳು, ಅದಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಅವಳಿಗಿದ್ದವು. ಗೆಳೆಯನ ಅಪಾರ್ಟ್‌ಮೆಂಟ್ ಬಾತ್‌ರೂಮ್‌ಗೆ ಹೋದ ವಲೇರಿ ಹೆಚ್ಚು ಹೊತ್ತಾದರೂ ಮರಳಿ ಬಂದಿರಲಿಲ್ಲ. ಗೆಳೆಯ ಹೋಗಿ ನೋಡಿದಾಗ ಅವಳು ಅಲ್ಲಿ ನಿಶ್ಚಳಾಗಿ ಬಿದ್ದಿದ್ದು ಕಂಡು ಬಂದಿತ್ತು.

ಮಾದಕವಸ್ತು ಓವರ್ ಡೋಸ್ ಸಾವಿಗೆ ಕಾರಣವೆನ್ನಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟ ಕಾರಣ ತಿಳಿಯಬಹುದು. ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡದ್ದಕ್ಕೆ ಈ ಹಿಂದೆ ವಲೇರಿಯನ್ನು ಬಂಧಿಸಲಾಗಿತ್ತು. ಪೊಲೀಸರಿಗೆ ನಕಲಿ ದಾಖಲೆ ತೋರಿಸಿದ್ದಕ್ಕಾಗಿ ಕಳೆದವಾರ ವಲೇರಿಯನ್ನು ಪೊಲೀಸರು ಬಂಧಿಸಿದ್ದರು. ನಂತರ 1,500 ಡಾಲರ್ ಜಾಮೀನಿನನಲ್ಲಿ ಆಕೆಯನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News