ಜಿಲ್ಲಾ ಕರಾವಳಿ ಉತ್ಸವಕ್ಕೆ ಮೆರಗು ನೀಡಿದ ಸಾಂಸ್ಕೃತಿಕ ಮೆರವಣಿಗೆ

Update: 2016-12-23 13:16 GMT

ಮಂಗಳೂರು, ಡಿ.23: ರಾಜ್ಯ ಮತ್ತು ಪಶ್ಚಿಮ ಕರಾವಳಿಯನ್ನು ಪ್ರತಿಬಿಂಬಿಸುವ ಎಲ್ಲ ಭಾಷೆ, ಧರ್ಮ, ಜೀವನ ಸಂಸ್ಕೃತಿ, ಜನಪದ, ಯಕ್ಷಗಾನ ಇತ್ಯಾದಿ ಪ್ರಕಾರದ ಸುಮಾರು 70ಕ್ಕೂ ಹೆಚ್ಚು ತಂಡಗಳ ಸಾಂಸ್ಕೃತಿಕ ಮೆರವಣಿಗೆ - ದಿಬ್ಬಣ ಹಾಗು ವಸ್ತು ಪ್ರದರ್ಶನದೊಂದಿಗೆ ಶುಕ್ರವಾರ ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
 
ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಸ್ತು ಪ್ರದರ್ಶನಕ್ಕೆ ಮತ್ತು ಸಚಿವ ಯು.ಟಿ. ಖಾದರ್ ಸಾಂಸ್ಕೃತಿಕ ಮೆರವಣಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಬ್ಯಾರಿ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾ ಕರಾವಳಿ ಉತ್ಸವ ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಮೆರವಣಿಗೆಯು ಕರಾವಳಿ ಉತ್ಸವ ಮೈದಾನದಿಂದ ಹೊರಟು ಹ್ಯಾಟ್‌ಹಿಲ್ ಪಂಪ್‌ಹೌಸ್ ಮುಂಭಾಗ, ರಾಮಕೃಷ್ಣ ವಿದ್ಯಾರ್ಥಿ ನಿಲಯ, ಗಣೇಶ್ ಬೀಡಿ ಕಾಂಪೌಂಡ್, ಪೂಂಜಾ ಬಿಲ್ಡಿಂಗ್, ಕಲ್ಯಾಣ್ ಜ್ಯುವೆಲ್ಲರಿ, ಬಳ್ಳಾಲ್‌ಭಾಗ್ ಸರ್ಕಲ್‌ನಲ್ಲಿ ಹಿಂದಿರುಗಿ ಎಸ್.ಡಿ.ಎಂ. ನೇತ್ರಾಲಯ, ಮನಪಾ ಮುಂಭಾಗ, ಮಹಾತ್ಮಾಗಾಂಧಿ ವೃತ್ತ, ಲಾಲ್‌ಭಾಗ್, ಕೆಎಸ್ಸಾರ್ಟಿಸಿ ಬಿಜೈ ಸರ್ಕಲ್, ಬಿಜೈ ಬಟ್ಟಗುಡ್ಡ, ಸರ್ಕ್ಯೂಟ್ ಹೌಸ್ ಜಂಕ್ಷನ್, ಕದ್ರಿ ಪಾರ್ಕ್ ರಸ್ತೆಯಲ್ಲಿ ಮುಂದುವರಿದು ಕದ್ರಿ ಉದ್ಯಾನವನದ ಒಳಗಡೆ ಇರುವ ಕರಾವಳಿ ಉತ್ಸವ ವೇದಿಕೆಯ ಎರಡು ಪಾರ್ಶ್ವಗಳಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಮಂಗಳವಾದ್ಯ, ತಟ್ಟಿರಾಯ, ಪಕ್ಕಿನಿಶಾನೆ, ಕೊಂಬು, ಚೆಂಡೆ, ರಣಕಹಳೆ, ಜಿಲ್ಲಾ ಪೊಲೀಸ್ ಬ್ಯಾಂಡ್, ಬಣ್ಣದ ಕೊಡೆಗಳು, ಬಸವ ತಂಡ, ಶಂಖದಾಸರು, ಕನ್ನಡ ಭುವೇಶ್ವರಿ ಸ್ತಬ್ಧ ಚಿತ್ರ, ಕೀಲು ಕುದುರೆ, ಕರಗ, ಕುಸ್ತಿಪಟುಗಳ ತಂಡ, ಹಾಸ್ಯಗೊಂಬೆ ತಂಡ, ದಪ್ಪು, ಅರೆಭಾಷೆ ಜನರ ಕುದುರೆ ಸವಾರಿ, ಒಪ್ಪಣಿ ತಂಡ, ಕೋಲ್ಕಳಿ, ಕೊಡವ ನೃತ್ಯ, ತಾಲೀಮು, ಮರಕಾಲು ಹುಲಿವೇಷ ಮತ್ತು ಹುಲಿವೇಷ, ಶಾರ್ದೂಲ - ಕರಡಿ ಕುಣಿತ, ಡೋಲು ಕುಣಿತ, ಆಟಿಕಳಂಜ, ಛತ್ರ ಕುಣಿತ, ಬೊಳ್ಗುಡೆ ನಲಿಕೆ, ಇರೆನಲಿಕೆ, ಪರಕೋಲು ನಲಿಕೆ, ಯಕ್ಷಗಾನ ವೇಷ, ಯಕ್ಷಗಾನದ ಬೃಹತ್ ಗೊಂಬೆ, ವೀರಭದ್ರ ಕುಣಿತ, ಬೇಡರಕುಣಿತ, ಮೈಸೂರು ನಗಾರಿ, ಗೊರವರ ಕುಣಿತ, ಡೊಳ್ಳು ಕುಣಿತ, ಜಗ್ಗಳಿಕೆ, ಫಟ್ಟಾಕುಣಿತ, ಪೂಜಾಕುಣಿತ, ಕಂಸಾಳೆ, ಮಹಿಳಾ ವೀರಗಾಸೆ, ಪುರವಂತಿಕೆ, ಸಿದ್ದಿ ದಮಾಮ್ ಕುಣಿತ, ಅಕ್ಕಮಹಾದೇವಿ, ವೀರಶೈವ ಮಹಿಳಾ ತಂಡ, ಹಾಲಕ್ಕಿ ಸುಗ್ಗಿ ಕುಣಿತ, ಕೋಲಾಟ, ಕಂಗೀಲು ನೃತ್ಯ, ಸೊಮನ ಕುಣಿತ ಇತ್ಯಾದಿ ಕಲಾತಂಡಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News