ನೆಲ ಜಲ ಪರಿಸರ ಸಂರಕ್ಷಣೆಯೊಂದಿಗೆ ಸೌರ್ಹಾದತೆಯ ಕ್ರಿಸ್‌ಮಸ್ ಹಬ್ಬ ಆಚರಿಸಿ

Update: 2016-12-23 14:20 GMT

ಮಂಗಳೂರು,ಡಿ.23:  ಈ ಬಾರಿಯ ಕ್ರಿಸ್‌ಮಸ್‌ನ್ನು ನೆಲ ಜಲ ಕಾಡು ಪರಿಸರ ಸಂರಕ್ಷಣೆಯೊಂದಿಗೆ ಸೌರ್ಹಾದತೆಯೊಂದಿಗೆ ಆಚರಿಸಲಾಗುವುದು ಮತ್ತು ಈ ಬಗ್ಗೆ ಒಂದು ವರ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಅತೀ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಯೇಸು ಜನಿಸಿದ ಜೆರುಸೆಲೆಮ್ ನಗರದ ಬೆತ್ಲೆಹೆಮ್ ಎಂಬ ಪುಟ್ಟ ಹಳ್ಳಿಯಲ್ಲಿ ದನದ ಕೊಟ್ಟಿಗೆಯ ಗೊದಲಿಯಲ್ಲಿ ಜನಿಸಿದರು. ಈ ಪ್ರತಿಕೃತಿಯ ಮಾದರಿಯನ್ನು ಹೆಚ್ಚಿನ ಕಡೆಗಳಲ್ಲಿ ಸಾಂಕೇತಿಕವಾಗಿ ಮಾಡಲಾಗುತ್ತದೆ. ಹಳ್ಳಿಯ ಪರಿಸರ,ನಿರ್ಮಲ ವಾತವರಣದಲ್ಲಿ ಬೆಳೆದ ಏಸು ಕ್ರಿಸ್ತರು ಜನರ ಅಂತರಂಗ ಹಾಗೂ ಬಹಿರಂಗದ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ನೀಡಿದ ಬೋಧನೆಯು ಇಂದಿಗೂ ಪ್ರಚಲಿತವಾಗಿದೆ.  ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಸಂದೇಶವನ್ನು ಪೋಪ್‌ ಅವರು ನೀಡಿದ್ದಾರೆ ಎಂದು ಬಿಷಪ್ ತಿಳಿಸಿದರು.

 ಬಿಷಪ್ ಹೌಸ್‌ನಿಂದಲೇ ಮಳೆ ಕೊಯ್ಲ ಆರಂಭ

ಕೊಡಿಯಾಲ ಬೈಲ್ ಧರ್ಮಾಧ್ಯಕ್ಷರ ಮನೆ ವಠಾರದಲ್ಲಿ ಮಳೆ ನೀರು ಕೊಯ್ಲು ಆರಂಭಿಸಿದ್ದು,  ಹಳೆ ಬೋರ್‌ವೆಲ್ ಹಾಗೂ ತೆರೆದ ಬಾವಿಗಳನ್ನು ಮಳೆ ನೀರು ಮರುಪೂರಣದ ವ್ಯವಸ್ಥೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಂದೆ ಧರ್ಮ ಪ್ರಾಂತ್ಯಕ್ಕೆ ಒಳಪಟ್ಟ ಎಲ್ಲಾ ಚರ್ಚ್ ಹಾಗೂ ಸಂಬಂಧಿಸಿದ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿ ಸ್ಥಳೀಯವಾಗಿ ಸಾಧ್ಯವಿರುವ ಎಲ್ಲಾ ಕಡೆ ನೀರಿಂಗಿಸುವ ತೆರೆದ ಬಾವಿಗಳನ್ನು ಮಳೆ ನೀರು ಕೊಯ್ಲಿಗೆ ಒಳಪಡಿಸುವ ಬಗ್ಗೆ ಹಾಗೂ ತೋಟಗಳಿಗೆ ನೀರಿಂಗಿಸುವ ಪ್ರಕ್ರೀಯೆ ಆರಂಭಿಸಲು ತಿಳಿಸಲಾಗುವುದು. ಧರ್ಮ ಕೇಂದ್ರ ಮತ್ತು ಅದಕ್ಕೆ ಒಳಪಟ್ಟ ತೋಟಗಳಲ್ಲಿ ಹಣ್ಣಿನ ಗಿಡ ,ತರಕಾರಿ ಗಿಡಗಳನ್ನು ಬೆಳೆಸಲು ಹಾಗೂ ನೀರಿಂಗಿಸುವ ಪ್ರಕ್ರೀಯೆಯನ್ನು ಸಾಮೂಹಿಕವಾಗಿ ಮಾಡಲು ಕರೆ ನೀಡುವುದಾಗಿ ಅಲೋಶಿಯಸ್ ಪಾವ್ಲ್ ಡಿ ಸೋಜ ತಿಳಿಸಿದ್ದಾರೆ.


 ಪರಿಸರ ಮಾಲಿನ್ಯಗೊಳಿಸುವ ಸುಡು ಮದ್ದು ಬೇಡ

ಸುಡುಮದ್ದುಗಳನ್ನು ಕ್ರಿಸ್‌ಮಸ್ ಅಥವಾ ಹಬ್ಬದ ಸಂದರ್ಭದಲ್ಲಿ ಬಳಸದೆ ಪರಿಸರ ಮಾಲಿನ್ಯಗೊಳಿಸದೆ ಹಬ್ಬವನ್ನು ಆಚರಿಸುವ ಬಗ್ಗೆ ಜನರಿಗೆ ಕರೆ ನೀಡುವುದಾಗಿ ಬಿಷಪ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಪ್ರಧಾನ ಗುರುಗಳಾದ ಮೋನ್ಸಿಂಜೋರ್ ಡೆನಿಸ್ ಮೊರಾಸ್ ಪ್ರಭು, ಧರ್ಮ ಪ್ರಾಂತ್ಯದ ಛಾನ್ಸಲರ್ ವಂ.ಹೆನ್ರಿ ಸಿಕ್ವೇರಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ.ವಿಲಿಯಂ ಮಿನೇಜಸ್,ಪಾಲನಾ ಸಮಿತಿಯ ಕಾರ್ಯದರ್ಶಿ ಎಂ.ಪಿ.ನರೋನ್ಹಾ,ಮಾರ್ಸೆಲ್ ಮೊಂತೇರೋ,ರೇಮಂಡ್ ಡಿಕುನ್ಹಾ,ಎಲಿಯಾಸ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News