ನರ್ಮ್ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಆಗ್ರಹ

Update: 2016-12-23 14:38 GMT

ಮಂಗಳೂರು, ಡಿ.23: ಮಹಾನಗರ ಪಾಲಿಕೆಗೆ ಒಳಪಡುವಂತಹ ವಾರ್ಡ್‌ಗಳಲ್ಲಿ ಬಸ್‌ಗಳ ವ್ಯವಸ್ಥೆಯ ಕೊರತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಎಸ್ಸಾರ್ಟಿಸಿ ಸಾರಿಗೆ ಅದಾಲತ್‌ನಲ್ಲಿ ಸಾರ್ವಜನಿಕರಿಂದ ದೂರುಗಳು ಕೇಳಿಬಂದವು.

ತಣ್ಣೀರುಬಾವಿ ಪ್ರದೇಶದಲ್ಲಿ ಸುಮಾರು 1,500 ಕುಟುಂಬಗಳು ವಾಸಿಸುತ್ತಿದ್ದು, ಅದೊಂದು ಪ್ರವಾಸಿ ಕೇಂದ್ರವೂ ಆಗಿದೆ. ಇಲ್ಲಿ ಬಸ್ ಕೊರತೆ ಇದ್ದು, ಕೂಡಲೇ ಸರಕಾರದಿಂದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಸ್ಟೇಟ್‌ಬ್ಯಾಂಕ್-ಪಣಂಬೂರು-ಸುರತ್ಕಲ್ ಮಾರ್ಗವಾಗಿ ಬಸ್ ವ್ಯವಸ್ಥೆ ಇದ್ದು, ಸರಿಯಾದ ಸಮಯಕ್ಕೆ ಬಸ್‌ಗಳು ಚಲಿಸುತ್ತಿಲ್ಲ. ಹೆಚ್ಚುವರಿಯಾಗಿ ಇನ್ನೂ 2 ನರ್ಮ್ ಬಸ್‌ಗಳನ್ನು ಈ ಮಾರ್ಗವಾಗಿ ಓಡಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ಪ್ರತಿಕ್ರಿಯಿಸಿ, ಈಗಾಗಲೇ ಬಸ್ ವ್ಯವಸ್ಥೆ ಕಲ್ಪಿಸಲು ಆರ್‌ಟಿಒಗೆ ಅರ್ಜಿ ಹಾಕಲಾಗಿದೆ. ಶೀಘ್ರ ಬಸ್ ವ್ಯವಸ್ಥೆ ಕಲಿಸಲಾಗುವುದು ಎಂದು ಹೇಳಿದರು.

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನರ್ಮ್ ಬಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಹಿರಿಯರಿಗೆ ಶೇ.20ರಿಂದ 40ರಷ್ಟು ರಿಯಾಯಿತಿ ನೀಡಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಜಿ.ಆರ್. ಭಟ್ ಅಭಿಪ್ರಾಯಪಟ್ಟರು.

ಹನುಮಂತ್ ಕಾಮತ್ ಮಾತನಾಡಿ, ಎಲ್ಲ ಮಾರ್ಗಗಳಲ್ಲಿಯೂ ನರ್ಮ್ ಬಸ್‌ಗಳನ್ನೇ ಬಿಡಬೇಕೆಂದೆನಿಲ್ಲ. ಆರ್ಡಿನರಿ ಬಸ್‌ಗಳ ವ್ಯವಸ್ಥೆ ಮಾಡಿದರೂ ನಡೆದೀತು. ಆದರೆ ಖಾಸಗಿ ಬಸ್‌ಗಳ ಹಾವಳಿಗೆ ನಿಯಂತ್ರಣ ತರಬೇಕು. ಖಾಸಗಿ ಬಸ್ ಮಾಲಕರು ಆರ್‌ಟಿಒ ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಖಾಸಗಿ ಬಸ್ ಮಾಲಕರು ಬಸ್ ಪ್ರಯಾಣ ದರ ಏರಿಸುತ್ತಿದ್ದಾರೆ. ಎಲ್ಲ ಕಡೆ ಚತುಷ್ಪಥ ರಸ್ತೆಗಳಾಗುತ್ತಿವೆ. ದುರಂತವೆಂದರೆ ಬಸ್‌ಗಳ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗಿಲ್ಲ ಎಂದರು.

 ಕವಿತಾ ದಿನೇಶ್ ಮಾತನಾಡಿ, ಮಡ್ಸೆಡೆಯಿಂದ ಬೊಂದೇಲ್‌ಗೆ ಬಸ್‌ಗಳು ಬರುತ್ತಿಲ್ಲ. ಹಲವಾರು ಮನವಿಗಳನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ದೂರಿದ ಅವರು, ಕೂಡಲೇ 2 ನರ್ಮ್ ಬಸ್‌ಗಳನ್ನು ಈ ಮಾರ್ಗವಾಗಿ ಓಡಿಸಬೇಕೆಂದು ಆಗ್ರಹಿಸಿದರು.

  ವಜ್ರಾಕ್ಷರಿ ಶೆಟ್ಟಿ ಮಾತನಾಡಿ, ಕಾಟಿಪಳ್ಳ -ಕೃಷ್ಣಾಪುರ-ಕಳಕೇಶ್ವರಿ ದೇವಸ್ಥಾನ ಮಾರ್ಗದವರೆಗೆ ರಸ್ತೆ ಇದ್ದು, ಬೆಳಗ್ಗೆ 7:30ಕ್ಕೆ ಬಸ್ ವ್ಯವಸ್ಥೆ ಇಲ್ಲ. ಸುರತ್ಕಲ್‌ವರೆಗೆ ಬರಬೇಕೆಂದರೂ ಸಾರ್ವಜನಿಕರು ಬಾಡಿಗೆ ರಿಕ್ಷಾಗಳ ಮೊರೆಹೋಗಬೇಕಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಓಡಿಸುತ್ತಿಲ್ಲವೆಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಅಧಿಕಾರಿ ವರ್ಣೇಕರ್, ಜನವರಿಯಿಂದ ಬಸ್‌ನ ಸಮಯ ಬದಲಾವಣೆ, ಅಗತ್ಯ ಬಸ್ ಪೂರೈಕೆ ಮಾಡಲಾಗುವುದು ಎಂದರು.

ತಾಪಂ ಸದಸ್ಯೆ ಶಶಿಕಲಾ ಮಾತನಾಡಿ, ಕೈಕಂಬ ಮಾರ್ಗವಾಗಿ ಬಸ್ ವ್ಯವಸ್ಥೆ ಸರಿಯಿಲ್ಲ. ಇಲ್ಲಿಯವರೆಗೆ ಹಲವಾರು ದೂರುಗಳನ್ನು ನೀಡಿದ್ದರೂ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು, ಶಾಶ್ವತ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಮಂಗಳೂರು ಸಾರಿಗೆ ವಿಭಾಗೀಯ ಸಂಚಾಲನಾಧಿಕಾರಿ ಜೆ. ಶಾಂತ್‌ಕುಮಾರ್, ಸಾರಿಗೆ ನಿರ್ದೇಶಕ ರಮೇಶ್ ಶೆಟ್ಟಿ, ಟಿ.ಕೆ. ಸುಧೀರ್ ಮತ್ತಿತರರಿದ್ದರು.

ನಗರದಲ್ಲಿ ಸರಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ಸಂಖ್ಯೆಯೇ ಹೆಚ್ಚಿದೆ. ಕೆಲವು ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಕೃತವಾಗಿವೆ. ಗ್ರಾಮೀಣ ಪ್ರದೇಶದಲ್ಲಿಯೂ ಬಸ್‌ಪಾಸ್ ವ್ಯವಸ್ಥೆಯನ್ನು ಕೈಗೊಳ್ಳುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊನೊಪೊಲೊ, ರಾಜಹಂಸಗಳಂತಹ ಬಸ್‌ಗಳಲ್ಲಿ ಸೀಟ್ ದೊರೆಯದಿದ್ದಾಗ ಮಾತ್ರ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವಂತಹದ್ದು ನಡೆದಿದೆ. ಪರಿಣಾಮಕಾರಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News