×
Ad

ಗಿಲ್‌ನೆಟ್ ದೋಣಿಗೆ ಢಿಕ್ಕಿ; ಓರ್ವ ಮೃತ್ಯು

Update: 2016-12-23 21:37 IST

ಉಡುಪಿ, ಡಿ.23: ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತಿದ್ದ ಗಿಲ್‌ನೆಟ್ ದೋಣಿಗೆ ಬೋಟ್ ಒಂದು ಡಿಕ್ಕಿ ಹೊಡೆದ ಪರಿಣಾಮ ದೋಣಿಯಲ್ಲಿದ್ದವರು ಸಮುದ್ರಕ್ಕೆ ಬಿದ್ದು, ಅವರಲ್ಲಿ ಓರ್ವರು ಮೃತಪಟ್ಟ ಘಟನೆ ಗುರುವಾರ ವರದಿಯಾಗಿದೆ.

ದೂರುದಾರರಾದ ಮಹಾಬಲೇಶ್ವರ ನಾಯ್ಕ ಎಂಬವರು ದೇವದಾಸ ಮತ್ತು ಹರೀಶ್ ತೊಟ್ಟಂ ಅವರೊಂದಿಗೆ ಶ್ರೀಲಕ್ಷ್ಮೀ ಗಿಲ್‌ನೆಟ್ ದೋಣಿಯಲ್ಲಿ ಮೀನುಗಾರಿಗೆಗೆಂದು ಡಿ.19ರಂದು ತೆರಳಿದ್ದು, ಮಲ್ಪೆ ಸಮುದ್ರ ತೀರದಿಂದ ಸುಮಾರು 18 ಮಾರು ಆಳಸಮುದ್ರದಲಿಲ ಮೀನುಗಾರಿಕೆ ನಡೆಸುತ್ತಿರುವಾಗ  ಅಪರಾಹ್ನ 2:45ರ ಸುಮಾರಿಗೆ ಮಲ್ಪೆ ಬಂದರು ಕಡೆಯಿಂದ ಅತಿವೇಗವಾಗಿ ಬಂದ ಶ್ರೀವೀರಾಂಜನೇಯ ಕೆರಿಯರ್ ಬೋಟ್ ಢಿಕ್ಕಿ ಹೊಡೆದಿತ್ತು.

ಇದರ ಪರಿಣಾಮ ದೋಣಿಯಲ್ಲಿದ್ದವರು ದೋಣಿ ಸಮೇತ ಮಗುಚಿ ಸಮುದ್ರಕ್ಕೆ ಬಿದ್ದಿದ್ದು, ಢಿಕ್ಕಿ ಹೊಡೆದ ಬೋಟಿನವರು ಸಮುದ್ರಕ್ಕೆ ಇಳಿದು ಅವರೆಲ್ಲರನ್ನೂ ಮೇಲಕ್ಕೆತ್ತಿ ಹಾಕಿದ್ದರು. ಢಿಕ್ಕಿಯಾದ ಪರಿಣಾಮ ದೋಣಿಯಲ್ಲಿದ್ದ ದೇವದಾಸ (50) ಎಂಬವರು ಗಾಯಗಳಿಂದ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅದರಲ್ಲಿದ್ದ ಹರೀಶ್ ಹಾಗೂ ಮಹಾಬಲೇಶ್ವರ ನಾಯ್ಕಿ ಅವರಿಗೂ ಗಾಯವಾಗಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಅಪಘಾತದಿಂದ ಮಹಾಬಲೇಶ್ವರ ನಾಯ್ಕ ಅವರ ದೋಣಿಯೊಳಗಿದ್ದ ಬಲೆಗಳು, ಇಂಜಿನ್, ಸ್ಟೋರೇಜ್ ಬಾಕ್ಸ್ ಹಾಗೂ ದೋಣಿಯು ಜಖಂಗೊಂಡಿದ್ದು ಸುಮಾರು 15 ಲಕ್ಷ ರೂ.ನಷ್ಟವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News