ಅಕ್ರಮ ಮರಳುಗಾರಿಕೆಗೆ ದಾಳಿ, ಸೊತ್ತುಗಳು ವಶ
ಬ್ರಹ್ಮಾವರ, ಡಿ.23: ಹಾವಂಜೆ ಗ್ರಾಮದ ಕಾರ್ತಿಬೈಲು ಪ್ರದೇಶದ ಮಡಿಸಾಲು ಹೊಳೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳುಗಾರಿಕೆ ನಡೆಯುತಿದ್ದ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೊರಕಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬ್ರಹ್ಮಾವರ ವಿಶೇಷ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮರಳುಗಾರಿಕೆ ಬಳಸಿದ ಸೊತ್ತುಗಳೊಂದಿಗೆ 4 ಮೆಟ್ರಿಕ್ ಟನ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಉಪ್ಪೂರಿನ ಫ್ರಾಂಕಿ ಡಿಸೋಜ ಹಾಗೂ ಹಾವಂಜೆಯ ಪ್ರಕಾಶ್ ಭಂಡಾರಿ ಅವರು ಅಕ್ರಮವಾಗಿ ಕಳ್ಳತನದಿಂದ ಮರಳುಗಾರಿಕೆ ನಡೆಸುತ್ತಿವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ವಶ:ಇನ್ನೊಂದು ಪ್ರಕರಣದಲ್ಲಿ ಹಾವಂಜೆ ಗ್ರಾಮದ ದಾಸಬೆಟ್ಟು ಕಂಬಳಿಬೆಟ್ಟು ಎಂಬಲ್ಲಿ ಮಡಿಸಾಲು ಹೊಳೆಯಲ್ಲಿ ಆರೋಪಿ ನಾಗರಾಜ ಹೆಗ್ಡೆ ಎಂಬವರು ದೋಣಿ ಬಳಸಿ ಯಾವುದೇ ಪರವಾನಿಗೆ ಪಡೆಯದೇ ಕಳ್ಳತನದಿಂದ ಮರಳುಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ ಮರಳುಗಾರಿಕೆ ಬಳಸಿದ ದೋಣಿ-1, ಕಬ್ಬಿಣದ ಚಾಪೆಲ್-2, ಕಬ್ಬಿಣದ ಸ್ಟಾಂಡ್-1, ಬಕೆಟ್-1 ಹಾಗೂ 8 ಮೆಟ್ರಿಕ್ ಟನ್‌ಗಳಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.