×
Ad

ಪತ್ನಿಯ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

Update: 2016-12-23 23:05 IST

ಮಂಗಳೂರು, ಡಿ. 23: ಮೂಡುಶೆಡ್ಡೆಯಲ್ಲಿ 2011ರಲ್ಲಿ ನಡೆದಿದ್ದ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣದಲ್ಲಿ ಮೃತ ಮಹಿಳೆಯ ಪತಿಯ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

 ಮೂಡುಶೆಡ್ಡೆ ನಿವಾಸಿ ರಾಜಾ (44) ಶಿಕ್ಷೆಗೊಳಗಾಗಿರುವ ಅಪರಾಧಿ.

ಪತ್ನಿಯನ್ನು ಕೊಲೆ ಮಾಡಿರುವುದಕ್ಕಾಗಿ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿದೆ. ವರದಕ್ಷಿಣೆ ಕಿರುಕುಳ ನೀಡಿರುವುದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ನ್ಯಾಯಾಲಯವೂ ತೀರ್ಪಿತ್ತಿದೆ. ದಂಡದ ಪೂರ್ಣ ಮೊತ್ತವನ್ನು ಮೃತ ಮಹಿಳೆಯ ಇಬ್ಬರು ಮಕ್ಕಳಿಗೆ ನೀಡಬೇಕು ಮತ್ತು ಸಂತ್ರಸ್ತರ ಪರಿಹಾರ ನಿಧಿಯಿಂದ ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ರಾಜಾ 2011ರ ಸೆಪ್ಟೆಂಬರ್ 1ರಂದು ತನ್ನ ಪತ್ನಿ ರಾಣಿಯನ್ನು ಬೆಂಕಿಹಚ್ಚಿದ್ದ. ಈ ಸಂದರ್ಭದಲ್ಲಿ ಆಕೆಯ ಬೊಬ್ಬೆ ಕೇಳಿ ಪಕ್ಕದ ಮನೆಯವರು ತೀವ್ರವಾಗಿ ಸುಟ್ಟ ಗಾಯಕ್ಕೊಳಗಾಗಿದ್ದ ರಾಣಿಯನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಬಳಿಕ ಕಾವೂರು ಪೊಲೀಸರಿಗೆ ಹೇಳಿಕೆ ನೀಡಿ, ತನ್ನ ಪತಿಯೇ ವರದಕ್ಷಿಣೆ ಕಿರುಕುಳ ನೀಡಿ, ಬೆಂಕಿಹಚ್ಚಿ ಕೊಲ್ಲಲು ಯತ್ನಿಸಿರುವುದಾಗಿ ತಿಳಿಸಿದ್ದರು. ಸೆ.8ರಂದು ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

  ರಾಜಾನನ್ನು ಬಂಧಿಸಿದ್ದ ಕಾವೂರು ಪೊಲೀಸರು, ಆತನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ನಡುವೆಯೇ ಮೃತ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಕುಟುಂಬದವರಿಗೆ ಸಾಕ್ಷ ಹೇಳದಂತೆ ಆರೋಪಿ ಬೆದರಿಕೆ ಹಾಕಿದ್ದ. ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಶಿವಪ್ರಸಾದ್ ಆಳ್ವ ಮತ್ತು ಬಿ.ಶೇಖರ್ ಶೆಟ್ಟಿ ವಾದಿಸಿದ್ದರು. ಪ್ರಾಸಿಕ್ಯೂಷನ್ ಪರ ವಕೀಲರ ವಾದವನ್ನು ಮಾನ್ಯ ಮಾಡಿದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಅವರು, ರಾಜಾ ಅಪರಾಧಿ ಎಂದು ಹೇಳಿ ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News