ಆರೋಗ್ಯ ವಿಮೆ: ಅದಾನಿ ಯುಪಿಸಿಎಲ್ ಸ್ಪಷ್ಟೀಕರಣ

Update: 2016-12-23 17:38 GMT

ಪಡುಬಿದ್ರಿ , ಡಿ. 23 : ಅದಾನಿ ಯುಪಿಸಿಎಲ್ ವತಿಯಿಂದ ಗ್ರಾಮಸ್ಥರಿಗೆ ಆರೋಗ್ಯ ವಿಮೆ ಮಾಡಿಸಲಾಗುವುದು ಎಂದು ಹೇಳಿ ಕೆಲವು ಕಿಡಿಗೇಡಿಗಳು ಎರ್ಮಾಳ್ ಗ್ರಾಮದಲ್ಲಿ ಬಡ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. 

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಅದಾನಿ ಯುಪಿಸಿಎಲ್‌ನ ಅಧಿಕಾರಿಗಳು, ಯುಪಿಸಿಎಲ್ ಇಲ್ಲಿಯವರೆಗೆ ಎಲ್ಲೂರು ಹಾಗೂ ಮುದರಂಗಡಿ ಗ್ರಾಮಸ್ಥರಿಗೆ ಮಾತ್ರ ಅದಾನಿ ಆರೋಗ್ಯ ವಿಮೆ ಚೀಟಿಯನ್ನು ಆಯಾಯ ಗ್ರಾಮ ಪಂಚಾಯಿತಿಯ ಮುಖಾಂತರ ವಿಮೆ ಚೀಟಿಯನ್ನು ಗ್ರಾಮಸ್ಥರಿಗೆ ವಿತರಿಸಿದೆ. ಗ್ರಾಮೀಣ ಜನರ ಅನುಕೂಲಕ್ಕಾಗಿ ಈ ವಿನೂತನ ಆರೋಗ್ಯ ವಿಮೆಯ ಯೋಜನೆಯನ್ನು ಅದಾನಿ ಯುಪಿಸಿಎಲ್ ತನ್ನ ಸಿ.ಎಸ್.ಆರ್ ಕಾರ್ಯಕ್ರಮದಡಿ ಆಯೋಜಿಸಿದೆ ಹಾಗೂ ಗ್ರಾಮಸ್ಥರಿಗೆ ಸಂಪೂರ್ಣವಾಗಿ ಉಚಿತ ಆರೋಗ್ಯ ಚೀಟಿಯನ್ನು ವಿತರಿಸಿದೆ. ಇದಕ್ಕೆ ಯಾವುದೇ ರೀತಿಯ ಹಣ ಗ್ರಾಮಸ್ಥರಿಂದ ಪಡೆಯಲಾಗಿಲ್ಲ.

ಅದಾನಿ ಯುಪಿಸಿಎಲ್ ಈ ಯೋಜನೆಯನ್ನು ಇತರೆ ಗ್ರಾಮಗಳಿಗೆ ವಿಸ್ತರಿಸಬೇಕಾದರೆ ಆಯಾ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಗ್ರಾಮಸ್ಥರ ಮಾಹಿತಿಯನ್ನು ಪಡೆದು ಪಂಚಾಯತಿಯ ಪರಾಮರ್ಶಿಸಿದ ಮೇಲೆ ಅದಾನಿ ಆರೋಗ್ಯ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗುವುದು. ಆರೋಗ್ಯ ವಿಮೆ ಗ್ರಾಮಸ್ಥರಿಗೆ ವಿಸ್ತರಿಸಲು ಅದಾನಿ ಯುಪಿಸಿಎಲ್ ಕಂಪನಿಯ ಅಧಿಕಾರಿಗಳೇ ಖುದ್ದು ಸಮೀಕ್ಷೆ ನಡೆಸಿ ಗ್ರಾಮಸ್ಥರ ಮಾಹಿತಿಯನ್ನು ಪಡೆಯುತ್ತಾರೆ, ಹೊರತು ಇತರ ಯಾವುದೇ ಸಂಘ ಸಂಸ್ಥೆಗೆ ಈ ಜವಾಬ್ದಾರಿಯನ್ನು ನೀಡಲಾಗುವುದಿಲ್ಲ.

ಈ ಸಂದರ್ಭದಲ್ಲಿ ಎರ್ಮಾಳು ಗ್ರಾಮದಲ್ಲಿ ಯಾರೋ ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಕಂಪನಿಯ ತೇಜೋವದೆಗಾಗಿ ಅಡ್ಡದಾರಿ ಹಿಡಿದಿದ್ದು, ಯಾವುದೋ ಸಂಸ್ಥೆಯ ಹೆಸರಿನಲ್ಲಿ ಅದಾನಿ ವಿಮೆ ಮಾಡಿಸಲಾಗುವುದು ಎಂದು ಸುಳ್ಳು ಮಾಹಿತಿ ನೀಡಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಕೃತ್ಯ ಅತ್ಯಂತ ಶೋಚನೀಯ. ಗ್ರಾಮಸ್ಥರು ಇಂತಹ ಕೃತ್ಯಗಳಿಗೆ ಮೋಸ ಹೋಗಬಾರದು ಎಂದು ಅದಾನಿ ಯುಪಿಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅದಾನಿ ಆರೋಗ್ಯ ವಿಮೆಯ ಬಗ್ಗೆ ಯಾವುದೇ ಮಾಹಿತಿ ಬೇಕಾದರೂ ಗ್ರಾಮಸ್ಥರು ನೇರವಾಗಿ ಎಲ್ಲೂರಿನ ಯುಪಿಸಿಎಲ್ ನ ಸ್ಥಾವರದ ಕಚೇರಿಗೆ ನೇರವಾಗಿ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News